ಯಾದಗಿರಿ: ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಆರಾಧ್ಯ ದೈವವಾದ ಶ್ರೀ ಧರ್ಮಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ದಾರೂಡರ ಪುರಾಣ ಪ್ರವಚನ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗಲಿದೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಜಾತ್ರಾ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಗ್ರಾಮದ ಸಮಸ್ತ ಸಕಲ ಸದ್ಭಕ್ತ ಮಂಡಳಿ ಸಿದ್ದತೆ ನಡೆಸಿದೆ. ಜಾತ್ರಾ ಪ್ರಯುಕ್ತ ಪ್ರವಚನ ಕಾರ್ಯಕ್ರಮವು ಮಾರ್ಚ್ 20 ರಿಂದ ಏಪ್ರಿಲ್ 04 ವರೆಗೆ ನಡೆಯಲಿದ್ದು, ಪ್ರತಿ ದಿನ ಸಂಜೆ 7:30 ರಿಂದ 09 ಗಂಟೆಯವರೆಗೆ ಪುಟ್ಟರಾಜ ಗವಾಯಿ ಅವರ ಶಿಷ್ಯರಾದ ಶ್ರೀ ಗವಿಸಿದ್ದೇಶ್ವರ ಶಾಸ್ತ್ರಿಗಳು ನಡೆಸಿಕೊಡಲಿದ್ದಾರೆ.
ಜಾತ್ರೆಯ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಮುತೈದೆಯರಿಗೆ(ಹೆಣ್ಣು ಮಕ್ಕಳಿಗೆ) ಪ್ರತ್ಯೇಕ ರಥ ಇದ್ದು, ಹೆಣ್ಣು ಮಕ್ಕಳು ಕೂಡಾ ಸಣ್ಣ ರಥ ಎಳೆದು ತಮ್ಮ ಭಕ್ತಿಯನ್ನು ಪ್ರಚುರ ಪಡಿಸುತ್ತಾರೆ. ಮುತೈದೆಯರಿಂದ ರಥೋತ್ಸವವು ಏಪ್ರಿಲ್ 01 ರ ಸಂಜೆ 6 ಗಂಟೆಗೆ ಹಾಗೂ ಧರ್ಮಲಿಂಗೇಶ್ವರ ರಥೋತ್ಸವವು ಏಪ್ರಿಲ್ 02 ರ ಸಂಜೆ 6 ಗಂಟೆಗೆ ನೆರವೇರಲಿದೆ. ಈ ರಥವನ್ನು ಗಂಡಸರು ಮಾತ್ರ ಎಳೆಯುತ್ತಾರೆ.
ದೋರನಹಳ್ಳಿ ಚಿಕ್ಕಮಠದ ಶ್ರೀ ಷ.ಬ್ರ.ಶಿವಲಿಂಗರಾಜೇಂದ್ರ ಶಿವಾಚಾರ್ಯ, ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ಶ್ರೀ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.