ಕಲಬುರಗಿ: ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಸಂದರ್ಭದಲ್ಲಿ ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಿಕಾರಂಗ ನಿರ್ವಹಿಸುತ್ತಿರುವುದರಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಾಬಣ್ಣ ಹೂವಿನಬಾವಿ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಜು.9 ರಂದು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಹನ ಮೂಲಾಂಶಗಳು ಮತ್ತು ಸುದ್ದಿಶೈಲಿಯ ಸೂತ್ರದನ್ವಯ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಮಾಜದ ಸಮಸ್ಯೆಗಳನ್ನು ಗುರುತಿಸಿ ನಿವಾರಿಸುವ ದೂರದೃಷ್ಟಿ ಚಿಂತನೆ ಮತ್ತು ಘಟನೆಯ ಸತ್ಯಾಸತ್ಯೆಯ ಮೇಲೆ ಬೆಳಕು ಚೆಲ್ಲಬೇಕು ಎಂದು ವೃತ್ತಿನಿರತ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪತ್ರಿಕಾ ರಂಗ ಸುಳ್ಳು ಸುದ್ದಿ ಬಿತ್ತರ ಮಾಡದೆ ಖಚಿತ ಮತ್ತು ನಿಖರವಾದ ಸಂಗತಿಗಳನ್ನು ಪ್ರಕಟಿಸಬೇಕು. ಸಮಾಜ ಮತ್ತು ಸರ್ಕಾರದ ಸೇತುವೆಯಾಗಿರುವ ಪತ್ರಕರ್ತರು ಸುದ್ದಿಯ ಖಚಿತತೆ, ವಾಸ್ತವತೆ ಮತ್ತು ವಿಶ್ವಾಸಗಳಿಗೆ ಬದ್ದರಾಗಿ ಕೆಲಸ ಮಾಡಿದರೆ ಪತ್ರಿಕೋದ್ಯಮ ವೃತ್ತಿಯಲ್ಲಿ ಸಾರ್ಥಕತೆ ಭಾವ ಮೂಡುತ್ತದೆ. ಪತ್ರಕರ್ತರಾಗ ಬಯಸುವವರಿಗೆ ಹೆಚ್ಚು ಅವಕಾಶಗಳಿವೆ. ಸೃಜನಶೀಲತೆ ಮೈಗೂಡಿಸಿಕೊಂಡರೆ ಮೊಬೈಲ್ ಮೂಲಕ ಮಾಧ್ಯಮ ವೃತ್ತಿ ಆರಂಭಿಸಬಹುದು ಎಂದು ಸಲಹೆ ನೀಡಿದರು.
ಪ್ರಭಾರ ಕುಲಸಚಿವ ಪ್ರೊ. ಚಂದ್ರಕಾಂತ ಎಂ ಯಾತನೂರ್ ಅತಿಥಿಯಾಗಿ ಮಾತನಾಡಿ, ಪ್ರಸ್ತುತ ಸಾಂಸ್ಥಿಕ ಸ್ವರೂಪ ಪಡೆದಿರುವ ಪತ್ರಿಕಾ ಸಂಸ್ಥೆಗಳು ಮತ್ತು ಪತ್ರಕರ್ತರ ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಸತ್ಯನಿಷ್ಠೆ ಮತ್ತು ಪತ್ರಿಕಾ ಧರ್ಮ ಪಾಲನೆಯಿಂದ ಪತ್ರಿಕೋದ್ಯಮ ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಿದೆ. ಪತ್ರಿಕಾಧರ್ಮ ಮತ್ತು ನೀತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮದ ಮೌಲ್ಯ ಉಳಿಯುತ್ತದೆ ಎಂದು ಹೇಳಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಡಾ. ಅಶೋಕ ಶರಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕಾ
ಕಾರ್ಯಕ್ರಮದಲ್ಲಿ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ಕೆ. ಎಂ. ಕುಮಾರಸ್ವಾಮಿ, ಡಾ. ರಾಜಕುಮಾರ ದಣ್ಣೂರು, ಡಾ. ವೆಂಕಟೇಶ್ ನರಸಪ್ಪ, ಡಾ. ತೀರ್ಥಕುಮಾರ ಡಾ. ಸಾಯಿಬಣ್ಣಾ ಗುಡುಬಾ, ಡಾ. ಸರದಾರ ರಾಯಪ್ಪ, ಬಹುಮಾಧ್ಯಮ ಕೇಂದ್ರದ ಸಿಬ್ಬಂದಿ ಶರಣು ನಾವಿ, ಸಿದ್ದಾರ್ಥ ದೊಡ್ಡಮನಿ, ಶಿಕ್ಷಕೇತರ ಸಿಬ್ಬಂದಿ ಅಯ್ಯಣ್ಣ ಬಡಿಗೇರ್ ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಮಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.