ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಹೆಸರು ಮುಂಚೂಣಿಗೆ ಬಂದಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಹೊಸ ಹಗರಣ ತಲೆಯೆತ್ತಿದ್ದು ಆಡಳಿತ ಪಕ್ಷ ಕಾಂಗ್ರೆಸ್ ಗೆ ತೀವ್ರ ಮುಜುಗರವನ್ನು ಉಂಟುಮಾಡಿದೆ. ಅದರಲ್ಲೂ ಮುಖ್ಯಮಂತ್ರಿ ತವರು ಜಿಲ್ಲೆಯಾದ ಮೈಸೂರು ಮತ್ತು ಪತ್ನಿಯ ಹೆಸರಿನ ಉಲ್ಲೇಖದಿಂದ ಈ ಪ್ರಕರಣವು ರಾಜ್ಯ ವ್ಯಾಪಿ ಸುದ್ದಿಯಾಗುತ್ತಿದ್ದು ಪ್ರತಿಪಕ್ಷದ ನಾಯಕರು ಮತ್ತು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ.
ವಾಲ್ಮೀಕಿ ನಿಗಮ ಹಗರಣದ ವಿಷಯದಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಸರಣಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ, ಇದೀಗ ಮುಖ್ಯಮಂತ್ರಿಯ ಕುಟುಂಬ ಸದಸ್ಯರ ವಿರುದ್ಧವೇ ಕೇಳಿಬಂದಿರುವ ಮುಡಾ ಪ್ರಕರಣದಲ್ಲಿ ರಾಜೀನಾಮೆಯ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ, ಪುತ್ರ ಮತ್ತು ಇತರೆ ಕೆಲವು ಆಪ್ತರ ಹೆಸರು ಪ್ರಕರಣದಲ್ಲಿ ಕೇಳಿಬಂದಿದ್ದು, ಇಡೀ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಈ ಸಾವಿರಾರು ಕೋಟಿ ರೂಪಾಯಿ ಬೃಹತ್ ಹಗರಣ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ( MUDA)ದ ನಿವೇಶನಗಳ ಹಂಚಿಕೆಯಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗಳಷ್ಟು ಭಾರೀ ಮೊತ್ತದ ಅಕ್ರಮ ನಡೆದಿದೆ ಎಂಬುದು ಮೂಲ ಆರೋಪ. ಪ್ರಾಧಿಕಾರದಿಂದ ಲೇಔಟ್ ನಿರ್ಮಾಣದ ವೇಳೆ ಈ ಅಕ್ರಮ ನಡೆದಿದ್ದು, ಲೇಔಟ್ಗಾಗಿ ಪಡೆದ ಭೂಮಿಯ ಬದಲಿಗೆ ಭೂ ಮಾಲೀಕರಿಗೆ ನೀಡಬೇಕಾದ 50-50 ನಿವೇಶನಗಳ ಹಂಚಿಕೆಯಲ್ಲಿ ಈ ಅಕ್ರಮ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರೂ ಫಲಾನುಭವಿ ಎಂಬುದು ಬಿಜೆಪಿ ಆರೋಪ. ಈ ಹಗರಣದ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ ಮೈಸೂರಿನ ಜಿಲ್ಲಾಧಿಕಾರಿಯದ ಡಾ. ಕೆ.ವಿ ರಾಜೇಂದ್ರ ಅವರ ವರ್ಗಾವಣೆ ಮಾಡಲಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.
ಈ ಹಗರಣದ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದೆ’ ಎಂದು ಹೇಳಿಕೆ ನೀಡಿದ್ದಾರೆ.
ಹಗರಣದಲ್ಲಿ ನೇರವಾಗಿ ಸಿಎಂ ಅವರ ಪಾತ್ರ ಇದೆ. 50:50 ಪ್ಯಾಕೇಜ್ ಮೈಸೂರಿನಲ್ಲಿ ಮಾತ್ರ ಇಂಪ್ಲಿಮೆಂಟ್ ಆಗಿದೆ ಅದು ಬೇರೆ ಕಡೆ ಆಗಿಲ್ಲ ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಆಗ್ರಹ ಮಾಡಿದ್ದಾರೆ.