ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಬಹಳ ಹಿಂದಿನಿಂದ ಚರ್ಚೆ ಆಗುತ್ತಿತ್ತು, ಇದಕ್ಕಾಗಿ ಸರ್ಕಾರಕ್ಕೆ ಸರೋಜಿನಿ ಮಹಿಷ ವರದಿಯನ್ನು ಸಲ್ಲಿಸಿತ್ತು.ಆದರೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗ ಬಲ ಸಿಗಬೇಕು ಎನ್ನುವ ಕಾರಣದಿಂದ ಕರ್ನಾಟಕ ಸರ್ಕಾರವು ಹೊಸ ವಿಧೇಯಕ ಜಾರಿಗೆ ತಂದಿದೆ.
ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಕ್ರಮದಲ್ಲಿ, ಕೈಗಾರಿಕಾ ಕಾರ್ಖಾನೆಗಳು ಮತ್ತು ಇತರ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ರಾಜ್ಯ ಉದ್ಯೋಗ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಖಾಸಗಿ ಉದ್ಯೋಗಗಳಲ್ಲಿ ಶೇ.50-75ರಷ್ಟು ಕನ್ನಡಿಗರನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಪುಟವು ಅನುಮೋದನೆ ಕೊಟ್ಟಿದೆ. ಶುಕ್ರವಾರ ಅಥವಾ ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ -2024 ಮಂಡನೆ ಆಗಲಿದೆ.
ಈ ಮಸೂದೆಯು ಕನ್ನಡಿಗರಿಗೆ ಆದ್ಯತೆ ನೀಡದ ಕಂಪನಿಗಳಿಗೆ ದಂಡವನ್ನು ವಿಧಿಸಲು ಅವಕಾಶ ನೀಡಲಿದೆ. ವಿಧೇಯಕದಲ್ಲಿನ ನಿಬಂಧನೆಗಳನ್ನು ಅನುಸರಿಸದ ಕಂಪನಿಗಳಿಗೆ 10,000 ರಿಂದ 25,000 ರೂ.ಗಳವರೆಗೆ ದಂಡ ವಿಧಿಸಲಾಗುವುದು. ಆನಂತರವೂ ಇದೇ ದೂರು ಇದ್ದರೆ ಜಾರಿ ಆಗುವವರೆಗೆ ಪ್ರತಿದಿನ 100 ರೂ.ಗಳನ್ನು ಸಂಗ್ರಹಿಸಲಾಗುತ್ತದೆ ಎನ್ನುವುದನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ವಿಷಯವನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ.ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬ ಖುಷಿಯಾಗುತ್ತಿದೆ. ಈ ವಿಧೇಯಕದಿಂದ ಶೇ 50 ರಷ್ಟು ಮ್ಯಾನೇಜ್ ಮೆಂಟ್ ಹುದ್ದೆಗಳು ಹಾಗೂ ಶೇ 75 ರಷ್ಟು ನಾನ್ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಸ್ಥಳಿಯರಿಗೆ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ “ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ” ಎಂದು ಸಿಎಂ ಹೇಳಿದ್ದಾರೆ.
ಮೀಸಲಾತಿಗೆ ಯಾರು ಅರ್ಹರು?
ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತಾಡಲು, ಓದಲು ಹಾಗೂ ಬರೆಯಲು ಬರುವವರು ಅಲ್ಲದೇ ನೋಡಲ್ ಏಜೆನ್ಸಿಗಳು ನಡೆಸುವ ಕನ್ನಡ ಭಾಷಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವವರು ಈ ಮೀಸಲಾತಿಗೆ ಅರ್ಹರಿರಲಿದ್ದಾರೆ.