ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ದಾಂಪತ್ಯ ಜೀವನದ ವಿಷಯ ಇದೀಗ ತಾರ್ಕಿಕ ಹಂತ ಪಡೆದುಕೊಂಡಿದೆ. ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಟಿ20 ವಿಶ್ವಕಪ್ ಫೈನಲ್ ಹೀರೋ ” ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ಇರಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಆದರೆ ಅದು ಆಗುತ್ತಿಲ್ಲ, ಇದು ನಮ್ಮಿಬ್ಬರ ಉತ್ತಮವಾದ ನಿರ್ಧಾರವೆಂದು ಭಾವಿಸುತ್ತೇವೆ ಇದು ನಮ್ಮ ನಡುವಿನ ಕಠಿಣ ನಿರ್ಧಾರವಾಗಿತ್ತು” ಎಂದು ತಿಳಿಸಿದ್ದಾರೆ.
ತಮ್ಮ ದಾಂಪತ್ಯ ಜೀವನದಲ್ಲಿ ಮಗು ಅಗಸ್ತ್ಯ ಹುಟ್ಟಿದ್ದಾನೆ. ಆತ ನಮ್ಮಿಬ್ಬರ ಜೀವನದ ಕೇಂದ್ರ ಬಿಂದುವಾಗಿಯೇ ಮುಂದುವರೆಯಲಿದ್ದಾನೆ. ಆತನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನು ನೀಡುತ್ತೇವೆ. ನಾವಿಬ್ಬರೂ ಕೂಡ ಪೋಷಕರಾಗಿ ಮುಂದುವರೆಯಲಿದ್ದೇವೆ ಎಂದು ತಮ್ಮ instagram ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.