ಇಂದಿನಿಂದ (ಜುಲೈ 22) ರಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದೆ. ಆಗಸ್ಟ್ 12 ರವೆಗೆ ಅಧಿವೇಶನ ನಡೆಯಲಿದ್ದು, ಜುಲೈ 23 ರ ಮಂಗಳವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಅಧಿವೇಶನದ ಪೂರ್ವಭಾವಿಯಾಗಿ ಜು.21 ರಂದು ಉಭಯ ಸದನಗಳ ರಾಜಕೀಯ ಪಕ್ಷಗಳ ಜೊತೆ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದು, ಅಧಿವೇಶನದಲ್ಲಿ ಚರ್ಚಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಇಂದಿನಿಂದ ಆರಂಭವಾಗುವ ಬಜೆಟ್ ಅಧಿವೇಶನವು ಆಗಸ್ಟ್ 12ರವರೆಗೆ ನಡೆಯಲಿದೆ.ಅಧಿವೇಶನದಲ್ಲಿ 16 ಕಲಾಪಗಳು ನಡೆಯಲಿವೆ. ಸೋಮವಾರವೇ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ (ತಿದ್ದುಪಡಿ) ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ ಸೇರಿ ಒಟ್ಟು ಆರು ವಿಧೇಯಕಗಳನ್ನು ಮಂಡಿಸಲಿದೆ ಎಂದು ತಿಳಿದುಬಂದಿದೆ.
ಸಾಲು ಸಾಲು ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇಂಡಿಯಾ ಒಕ್ಕೂಟವು ಸಜ್ಜಾಗಿದೆ. ಅದರಲ್ಲೂ, ಮಣಿಪುರ ಹಿಂಸಾಚಾರ, ನೀಟ್ ಪ್ರಶ್ನೆಪತ್ರಿಕೆ ಪ್ರಕರಣ, ಬೆಲೆ ಏರಿಕೆ, ಯುಪಿಎಸ್ಸಿ ಅಕ್ರಮ ಸೇರಿ ಹಲವು ವಿಷಯಗಳನ್ನು ಪ್ರತಿಪಕ್ಷಗಳು ಚರ್ಚೆಗೆ ತರಲಿವೆ. ಸರ್ಕಾರಕ್ಕೆ ಚಾಟಿ ಬೀಸಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಮೋದಿ 3.0 ಬಜೆಟ್ ಮಂಡನೆ
ಮಂಗಳವಾರದಂದು (ಜುಲೈ 23) ಕೇಂದ್ರ ಬಜೆಟ್(Modi 3.0 Budget) ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ ರೈತರಿಗೆ ಸಿಗುವ ಕಿಸಾನ್ ಸಮ್ಮಾನ್ ಯೋಜನೆಯ ಹಣ ಹೆಚ್ಚುವರಿಯಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ಮಹಿಳೆಯರು, ಕಾರ್ಮಿಕರು ಸೇರಿದಂತೆ ಅನೇಕ ಮಧ್ಯಮ ವರ್ಗದ ಜನತೆಗೆ ಬಜೆಟ್ನಲ್ಲಿ ಅನೇಕ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಯಾವೆಲ್ಲ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುತ್ತಾರೋ ಅಥವಾ ಪ್ರತಿಪಕ್ಷಗಳ ಆರೋಪಕ್ಕೆ ಬಜೆಟ್ ಅಧಿವೇಶನದ ಸಮಯ ಕಳೆದುಹೋಗುತ್ತೋ ಕಾದು ನೋಡಬೇಕಾಗಿದೆ.