14 hours work in karnataka: ಕಳೆದ ಒಂದು ವಾರಗಳಿಂದ ಖಾಸಗಿ ಕಂಪನಿಗಳಲ್ಲಿ ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಐಟಿ ಕಂಪನಿಗಳಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಕರ್ನಾಟಕದ ಐಟಿ ಕಂಪನಿಗಳು ಸರ್ಕಾರಕ್ಕೆ ಸಲ್ಲಿಸಿದ್ದು, ನಿರ್ಧಾರದ ಕುರಿತು ಸಭೆ ನಡೆಸಿದೆ.
ಕರ್ನಾಟಕದಲ್ಲಿನ ಖಾಸಗಿ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ವಿಧೇಯಕಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಖಾಸಗಿ ಉದ್ಯಮಿಗಳ ಒತ್ತಡದ ಬಳಿಕ ಅದನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದುಕೊಂಡ ಬೆನ್ನಲ್ಲೇ, ಐಟಿ ಕಂಪನಿಗಳಲ್ಲಿ ಉದ್ಯೋಗ ಅವಧಿ ವಿಸ್ತರಣೆ ವಿವಾದ ಶುರುವಾಗಿದೆ.
ಹೊಸ ಪ್ರಸ್ತಾವನೆಯಂತೆ ಐಟಿ ಉದ್ಯೋಗಿಗಳು, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಸ್ತಾವನೆ ಕುರಿತು ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. ಐಟಿ ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಕುರಿತು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ.
ರಾಜ್ಯ ಐಟಿ ಕಂಪನಿಗಳ 14 ಗಂಟೆ ಕೆಲಸದ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಸಂಘ(ಕೆಐಟಿಯು) ಭಾರಿ ವಿರೋಧ ವ್ಯಕ್ತಪಡಿಸಿದೆ. ಈ ತಿದ್ದುಪಡಿಯು ಪ್ರಸ್ತುತ ಮೂರು ಪಾಳಿಗಳಲ್ಲಿರುವ ಪದ್ಧತಿಯ ಬದಲಿಗೆ ಎರಡು ಪದ್ಧತಿಯನ್ನು ಅನುಮತಿಸುವುದಾಗಿದೆ. ಇದರಿಂದ ಮೂರನೇ ಒಂದು ಭಾಗದಷ್ಟು ಕಾರ್ಮಿಕರನ್ನು ವಜಾಗೊಳಿಸುವ ಹುನ್ನಾರವಾಗಿದೆ ಎಂದು ಕೆಐಟಿಯು ತಿಳಿಸಿದೆ.
ಕೆಸಿಸಿಐ ವರದಿಯ ಪ್ರಕಾರ ಐಟಿ ವಲಯದ ಶೇ.45 ರಷ್ಟು ಉದ್ಯೋಗಿಗಳು ಒತ್ತಡದಂತ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಶೇ.55 ರಷ್ಟು ಮಂದಿ ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈಗ ಜಾರಿಗೆ ತರಲು ಹೊರಟಿರುವ ತಿದ್ದುಪಡಿ ಉದ್ಯೋಗಿಗಳನ್ನು ಮತ್ತಷ್ಟು ಆಘಾತಕ್ಕೆ ದೂಡುತ್ತದೆ ಎಂದು ಕೆಐಟಿಯು ತಿಳಿಸಿದೆ.