ಈ ಬಾರಿಯಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಮೈಸೂರಿನ ಮೂಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಸದ್ಯ ಮುಡಾ ಚರ್ಚೆಗೆ ಅವಕಾಶ ಕೋರಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು. ನಿಲುವಳಿಯನ್ನ ಸ್ಪೀಕರ್ ಖಾದರ್ ತಿರಸ್ಕರಿಸಿದ್ದು, ಇದೀಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕರು ಜಂಟಿಯಾಗಿ ಅಹೋರಾತ್ರಿ ಧರಣಿ ಕುಳಿತ್ತಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ರಾಮನ ಭಜನೆ ಮಾಡುತ್ತಿದ್ದಾರೆ.ಧರಣಿಯ ಸ್ಥಳಕ್ಕೆ ವಿಧಾನಸಭ ಕಾರ್ಯದರ್ಶಿ ಎಂ,ಕೆ, ವಿಶಾಲಾಕ್ಷಿ ಭೇಟಿ ನೀಡಿದ್ದು, ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದ್ದಾರೆ, ವಾಲ್ಮೀಕಿ ಹಾಗೂ ಮುಡಾ ಹಗರಣದ ಹಣದಿಂದ ನಮಗೆ ಊಟದ ವ್ಯವಸ್ಥೆ ಬೇಡ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ರಾತ್ರಿಯ ಊಟ ಮತ್ತು ಹಾಸಿಗೆ ವ್ಯವಸ್ಥೆಯನ್ನು ಬಿಜೆಪಿ ಶಾಸಕರು ತಾವೇ ಮಾಡಿಕೊಂಡಿದ್ದಾರೆ. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರಿಗೆ ಊಟ ಮತ್ತು ಹಾಸಿಗೆ ವ್ಯವಸ್ಥೆಯ ಹೊಣೆ ಹೊರಿಸಲಾಗಿದೆ.
ಮೂಡ ವಿಚಾರ ಕುರಿತಂತೆ ಚರ್ಚೆಗೆ ಅವಕಾಶ ನೀಡದಿರುವ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಅಹೋರಾತ್ರಿ ಧರಣಿ ಮುಂದುವರಿಸಿದ್ದು. ಸದನದ ಬಾವಿಯಲ್ಲಿ ವಿಪಕ್ಷಗಳ ಧರಣಿ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ನಾಳೆ ಬೆಳಿಗ್ಗೆ 9:30ಕ್ಕೆ ವಿಧಾನಸಭೆ ಕಲಾಪ ಮುಂದೂಡಿದ್ದಾರೆ.