Free House Scheme: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಅಡಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಯೋಜನೆ ಅಡಿ ಆಯ್ಕೆಯಾದ 12,153 ಕುಟುಂಬಗಳು ಕಟ್ಟಬೇಕಿದ್ದ ತಲಾ ₹1 ಲಕ್ಷ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ.
ಬಿಜೆಪಿ ಸರ್ಕಾರದಲ್ಲಿ ಯೂನಿಟ್ ವೆಚ್ಚ ಹೆಚ್ಚಳಕ್ಕೆ ಒಳಗಾಗಿದ್ದ 12,153 ಕುಟುಂಬಗಳಿಗೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ಮನೆಗೆ 1 ಲಕ್ಷ ರೂ. ನಂತೆ 121.53 ಕೋಟಿ ರೂ. ಸರ್ಕಾರವೇ ಭರಿಸಲು ಒಪ್ಪಿಗೆ ನೀಡಿದೆ.
ಸಿಎಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರದ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯೋಜನೆಗೆ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ರೂ.6 ಲಕ್ಷ ನಿಗದಿ ಮಾಡಲಾಗಿತ್ತು. ಕೇಂದ್ರ ಸರ್ಕಾರ ರೂ.1.50 ಲಕ್ಷ, ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ ರೂ.1.20 ಲಕ್ಷ, ಪರಿಶಿಷ್ಟ ವರ್ಗಕ್ಕೆ ರೂ.2 ಲಕ್ಷ ನಿಗದಿ ಮಾಡಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ 10.60 ಲಕ್ಷಕ್ಕೆ ಹೆಚ್ಚಳ ಮಾಡಿದ್ದರು. ರೂ.60 ಸಾವಿರ ಜಿಎಸ್’ಟಿ ಸೇರಿ 11. 20 ಲಕ್ಷವಾಗಿತ್ತು. ಸಿದ್ದರಾಮಯ್ಯ ಅವರು ಈಗ ತೆಗೆದುಕೊಂಡ ತೀರ್ಮಾನದಿಂದ ಸಾಮಾನ್ಯ ವರ್ಗ ರೂ.7.50 ಲಕ್ಷ, ಪರಿಶಿಷ್ಟರು ರೂ.6.70 ಲಕ್ಷ ಕಟ್ಟಬೇಕಾಗುತ್ತದೆ ಎಂದರು.