ಚನ್ನಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯದಲ್ಲೂ ಕೂಡ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿದರು. ಆದರೆ ಈ ಬಾರಿ ಉಪಮುಖ್ಯಮಂತ್ರಿಗಳು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿರುವುದು ವಿಶೇಷವಾಗಿ ಕಂಡುಬಂದಿದೆ.
ಚನ್ನಪಟ್ಟಣದ ಇತಿಹಾಸದಲ್ಲೇ ಮೊದಲು ಉಪಮುಖ್ಯಮಂತ್ರಿ ಒಬ್ಬರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ಬರುತ್ತಿದ್ದು, ಉಪಮುಖ್ಯಮಂತ್ರಿಗಳು ಇಂದಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಪುಷ್ಠಿಯಂತೆ ಡಿ.ಕೆ ಶಿವಕುಮಾರ್ ನಗರದ ಬಾಲಕರ ಪದವಿ ಪೂರ್ವ ಕಾಲೇಜು, ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಇಷ್ಟೇ ಅಲ್ಲದೆ ಉಪಚುನಾವಣೆ ಘೋಷಣೆಗೂ ಮುನ್ನವೇ ರಂಗೇರಿದ ಚುನಾವಣಾ ಅಖಾಡದಲ್ಲಿ ಟಿಕೆಟ್ ಫೈಟ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಸಿಪಿ ಯೋಗೇಶ್ವರ್ ಮತ್ತು ಡಿಕೆ ಶಿವಕುಮಾರ್ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದೇವೆ. ಹಿಂದಿನ ಶಾಸಕರು ಇಂಥ ಕಾರ್ಯಕ್ಕೆ ಬಂದಿದ್ರೋ ಇಲ್ವೋ, ಅದರ ಬಗ್ಗೆ ಚರ್ಚೆ ಮಾಡಲ್ಲ. ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಅಲ್ಲದೆ, ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆ ಆಗ್ತಿದೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕೆಲಸ ಆಗ್ತಿದೆ. ನಿಮ್ಮನ್ನ ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗಾಗಲೇ ಕ್ಷೇತ್ರದ ಜನರಿಗೆ ನಿವೇಶನ ಕೊಡಲು ಜಾಗ ಗುರುತು ಮಾಡಿದ್ದೇವೆ. ಚನ್ನಪಟ್ಟಣ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ಜಿಲ್ಲೆಯಲ್ಲಿ ಹುಟ್ಟಿದ್ದೇವೆ, ಈ ಜನರ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ. ಚನ್ನಪಟ್ಟಣಕ್ಕೆ ಸಿಎಂ 150ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ, ಈ ಬಗ್ಗೆ ನಿನ್ನೆ ಆದೇಶ ಆಗಿದೆ. ಪಕ್ಷಾತೀತವಾಗಿ ಇಲ್ಲಿ ಅಭಿವೃದ್ಧಿ ಕೆಲಸ ಮಾಡ್ತೇವೆ, ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದರು.