ಜನಸಾಮಾನ್ಯರಿಗೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ ಇದರ ಜೊತೆಗೆ ಮತ್ತೊಂದು ದರ ಏರಿಕೆಯ ಸುಳಿವು ಸಿಕ್ಕಿದೆ. ಬಸ್ ಪ್ರಯಾಣ ದರದ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕೆ ಎಸ್ ಆರ್ ಟಿ ಸಿ ಬೆಲೆ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ ನಾವು ಇನ್ನು ಯಾವ ತೀರ್ಮಾನವೂ ಮಾಡಿಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಧರೆ ಏರಿಕೆ ಬಗ್ಗೆ ಸುಳಿವು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಿಬ್ಬಂದಿ ವೇತನ, ಡೀಸೆಲ್, ಬಿಡಿ ಭಾಗಗಳ ಬೆಲೆ ಹೆಚ್ಚಳದಿಂದ ನಿಗಮಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ ಶೇ.15 ರಿಂದ ಶೇ.20 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿದೆ. ಕೆಲವೇ ದಿನಗಳಲ್ಲಿ ಸಿಎಂ ಸಭೆ ನಡೆಸಿ ದರ ಹೆಚ್ಚಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ’ ಎಂದರು.
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಶೇ.15 ರಿಂದ ಶೇ.20 ರಷ್ಟು ಏರಿಕೆಗೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇದ್ದು, ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.