ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಬೀಳುತ್ತಿದೆ. ಇದರಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗತೊಡಗಿವೆ. ಕೆಆರ್‌ಎಸ್, ಹೇಮಾವತಿ, ಕಬಿನಿ, ನಾರಾಯಣಪುರ ಜಲಾಶಯ ಭರ್ತಿಯಾಗಲು ಇನ್ನು ಕೆಲವೇ ಅಡಿಗಳು ಬಾಕಿ ಇದೆ.
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಬೀಳಲಿದೆ. ಈಗ ಬಿದ್ದ ಮಳೆಗೆ ಕರ್ನಾಟಕದ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಹಾರಂಗಿ, ಕಬಿನಿ, ಕೆಆರ್‌ಎಸ್, ನಾರಾಯಣಪುರ ಜಲಾಶಯಗಳು ಭರ್ತಿಯಾಗಲು ಇನ್ನು ಕೆಲವೇ ಅಡಿ ಬಾಕಿ ಇದೆ.
ಎಡೆಬಿಡದೇ ಸುರಿದ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಒಳ ಹರಿವಿನ ಪ್ರಮಾಣ 40,490 ಕ್ಯೂಸೆಕ್ ತಲುಪಿದೆ. ಅಣೆಕಟ್ಟೆಯ ನೀರಿನ ಮಟ್ಟ ಗುರುವಾರ ರಾತ್ರಿ 8 ಗಂಟೆಯ ವೇಳೆಗೆ 114.90 ಅಡಿಗೆ ತಲುಪಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದ ಕೃಷ್ಣ ರಾಜ ಸಾಗರ (KRS) ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಆರ್ಎಸ್ನ ಒಳಹರಿವಿನ ಮಟ್ಟ 44,617 ಕ್ಯೂಸೆಕ್ ಇದೆ. 116.60 ಅಡಿ ನೀರಿನ ಮಟ್ಟ ತಲುಪಿದೆ. ಕೆಆರ್‌ಎಸ್ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಇಂದು (ಜುಲೈ 20) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಹಾರಂಗಿ, ಜಲಾಶಯ ಭರ್ತಿಯಾಗಲು ಇನ್ನು 2 ಟಿಎಂಸಿ ನೀರು ಬೇಕು. ಹೇಮಾವತಿ ಜಲಾಶಯಕ್ಕೆ 3 ಟಿಎಂಸಿ, ಕೆಆರ್‌ಎಸ್ ಭರ್ತಿಯಾಗಲು 6 ಟಿಎಂಸಿ ನೀರು ಬೇಕಾಗಿದೆ. ಇನ್ನುಳಿದಂತೆ ಎಲ್ಲ ಜಲಾಶಯಗಳ ನೀರಿನ ಒಳ ಹರಿವು ಹೆಚ್ಚಾಗಿದೆ. ಈ ಪೈಕಿ ಲಿಂಗನಮಕ್ಕಿ, ಸುಪಾ, ವಾರಾಹಿ ಜಲಾಶಯಗಳಲ್ಲಿ ಹೊರ ಹರಿವು ನಿಲ್ಲಿಸಲಾಗಿದೆ. ಅಲ್ಲಿ ಇನ್ನೂ ಜಲಾಶಯ ಅರ್ಧದಷ್ಟೂ ಭರ್ತಿಯಾಗಿಲ್ಲ.