ಮೈಸೂರು ಸಂಸ್ಥಾನವು ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ಕೆಂಪು–ಹಳದಿ ಟ್ಯಾಗ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರು ಈ ಹಿಂದೆ ನೀಲಿ ಬಣ್ಣದ ಐಡಿ ಟ್ಯಾಗ್ ಹಾಕುತ್ತಿದ್ದರು. ಆದರೆ ಇದೀಗ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದ್ದು, ಕೆಂಪು ಹಾಗೂ ಹಳದಿ ಬಣ್ಣದ ಟ್ಯಾಗ್ ಹಾಕುವುದನ್ನು ಕಡ್ಡಾಯಗೊಳಿಸಿದೆ.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿವೆ. ಇದಕ್ಕಾಗಿ ನಡೆಸುತ್ತಿರುವ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ನಾಡ ಧ್ವಜದ ಬಣ್ಣಗಳನ್ನು ಒಳಗೊಂಡ ಟ್ಯಾಗ್ ಅನ್ನು ವಿನ್ಯಾಸ ಮಾಡಲಾಗಿದೆ. ಸರ್ಕಾರದ ಎಲ್ಲಾ ನೌಕರರು ಕಡ್ಡಾಯವಾಗಿ ಇದನ್ನು ಧರಿಸಬೇಕು ಎಂದು ರಾಜ್ಯ ಸರ್ಕಾರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಎಲ್ಲ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕೆಂಪು ಹಳದಿ ಬಣ್ಣದ ಟ್ಯಾಗ್ ಒದಗಿಸಿಕೊಡಬೇಕು ಎಂದು ಸೂಚಿಸಲಾಗಿದೆ.
ನೂತನ ಕೊರಳುದಾರದ ವಿನ್ಯಾಸವನ್ನು https://photos.app.goo.gl/YcJeNHnDNPecW8Q48 ನ ಆನ್‌ಲೈನ್ ವಿಳಾಸದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಆದೇಶದಲ್ಲಿ ಸಂದೀಪ್ ಬಿ.ಕೆ ಅವರು ತಿಳಿಸಿದ್ದಾರೆ.