Paris Olympics 2024: ಜುಲೈ 26ರಂದು ಆರಂಭಗೊಂಡ 33ನೇ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು (ಆಗಸ್ಟ್ 11)ರಂದು ತೆರೆ ಬೀಳಲಿದೆ. ಸಮಾರೋಪ ಸಮಾರಂಭವು ಇಂದು ಮಧ್ಯರಾತ್ರಿ 12:30 ಕ್ಕೆ ಪ್ರಾರಂಭವಾಗಿ ಬೆಳಗಿನ ಮೂರು ಗಂಟೆವರೆಗೂ ನಡೆಯುತ್ತದೆ.
ಈ ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶಕರು, ಅಕ್ರೋಬ್ಯಾಟ್ ಗಳು, ನೃತ್ಯಗಾರರು ಮತ್ತು ಸರ್ಕಸ್ ಕಲಾವಿದರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಭಾರತದ ಧ್ವಜದಾರಿಗಳಾಗಿ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಕಾಣಿಸಿಕೊಳ್ಳಲಿದ್ದಾರೆ.
ಇಂದು ತೆರೆ ಕಾಣಲಿರುವ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟ
ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ 45 ಸಾವಿರದಷ್ಟು ಕಾರ್ಯಕರ್ತರಿಗೆ ಕೃತಜ್ಞತಾ ಸಲ್ಲಿಕೆ, ಕೊನೆಯ ಸ್ಪರ್ಧಾದ ವನಿತಾ ಮ್ಯಾರಥ್ಯಾನ್ ವಿಜೇತರಿಗೆ ಪದಕ ವಿತರಣೆ, ಅಥ್ಲೆಟಿಕ್ ಪರೇಡ್, ಬಳಿಕ ಒಲಂಪಿಕ್ ಧ್ವಜವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ಯಾರಿಸ್ ಹಾಗೂ ಲಾಸ್ ಏಂಜಲೀಸ್ ನಗರಗಳ ಮೇಯರ್‌ಗಳು ಉಪಸ್ಥಿತರಿರುತ್ತಾರೆ.
ಈ ಬಾರಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿರುವುದು ಭಾರತದ ಸರ್ವಶ್ರೇಷ್ಠ ಸಾಧನೆ. ಹಾಗೆಯೇ ಶೂಟಿಂಗ್ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಒಟ್ಟು 6 ಪದಕಗಳೊಂದಿಗೆ ಭಾರತ ತಂಡವು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಅಂತ್ಯಗೊಳಿಸಿದೆ.