Movie Ticket Price Hike: ದೊಡ್ಡ ನಟರ ಸಿನಿಮಾಗಳು ರಿಲೀಸ್ ಆಗದ ಕಾರಣ ಕನ್ನಡ ಚಿತ್ರರಂಗವು ಬಾಕ್ಸ್ ಆಫೀಸ್ ನಲ್ಲಿ ತೀವ್ರ ನಷ್ಟವನ್ನು ಅನುಭವಿಸುತ್ತಿದೆ. ಇನ್ನು ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಇಂತಾ ಸಮಯದಲ್ಲಿ ಜನರನ್ನು ಥಿಯೇಟರ್ಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಇದೇ ವೇಳೆ ಕರ್ನಾಟಕ ಸರ್ಕಾರವು ಸಿನಿಮಾ ಟಿಕೆಟ್ & ಒಟಿಟಿ ವೇದಿಕೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕಗಳ ಮೇಲೆ ಶೇಕಡಾ 2ರಷ್ಟು ಸೆಸ್ ವಿಧಿಸಲು ಯೋಜಿಸಿದೆ. ಈ ಮೂಲಕ ಸಿನಿಮಾ ಟಿಕೆಟ್ ಉತ್ತರಗಳು ಹೆಚ್ಚಾಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ರಾಜ್ಯ ಸರ್ಕಾರ, ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯಲ್ಲಿ ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇಕಡ ಒಂದರಿಂದ ಎರಡರಷ್ಟು ಹೊಸ ಸೆಸ್ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಇಎಸ್ಐ, ಪಿಎಫ್ ಸೇರಿದಂತೆ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕರ್ನಾಟಕ ಬಯಲಾಟ ಅಕಾಡೆಮಿಯಂತಹ ಸರ್ಕಾರದಿಂದ ಅನುಮೋದಿತ ಅಕಾಡೆಮಿಗಳಿಂದ ಗುರುತಿಸಲ್ಪಟ್ಟ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಈ ಮಸೂದೆಗೆ ಒಳಪಪಟ್ಟಿದೆ.