ಯಾದಗಿರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡಲಾಗಿದ್ದು, ಮೃತ ಪಿಎಸ್ಐ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡುವುದಾಗಿ ಜಿ. ಪರಮೇಶ್ವರ್ ಘೋಷಣೆ ಮಾಡಿದ್ದಾರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಇಂದು (ಆಗಸ್ಟ್ 7) ಮೃತ ಪಿಎಸ್ಐ ಪರಶುರಾಮ ಅವರ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಶುರಾಮ್ ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಸೂಕ್ತವಾದ ಕೆಲಸ ನೀಡುತ್ತೇವೆ. ರಾಯಚೂರು ವಿಶ್ವವಿದ್ಯಾಲಯ ಅಥವಾ ಚೆಸ್ಕಾಂನಲ್ಲಿ ಕೆಲಸ ಕೊಡಿಸುವಂತೆ ಕೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದರು.
ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ನಿರೀಕ್ಷೆ ಮಾಡಲಾಗುತ್ತಿದೆ. ಆರೋಪ ಕೇಳಿ ಬಂದ ದಿನವೇ ಸಿಐಡಿ ತನಿಖೆಗೆ ಪ್ರಕರಣವನ್ನು ನೀಡಿದ್ದೇವೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ, ಯಾರು ಕೂಡ ನಾ ತೆಗೆದುಕೊಂಡು ವರ್ಗಾವಣೆ ಮಾಡಿಲ್ಲ ಎಂದು ತಿಳಿಸಿದರು.
ಪಿಎಸ್ಐ ಪರಶುರಾಮ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದು ನಮ್ಮ ಧರ್ಮ, ತನ್ನ ಕುಟುಂಬದವರ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ಅವನೇ ನೋಡಿಕೊಳ್ಳುತ್ತಿದ್ದ. ಈಗ ಕುಟುಂಬ ಸಂಕಷ್ಟವಲ್ಲದೆ, ಬೀದಿಗೆ ತಳ್ಳಿದಂತಾಗಿದೆ. ಕಠಿಣ ಪರಿಶ್ರಮದಿಂದ ಎಂಟು ಪರೀಕ್ಷೆಗಳನ್ನು ಪಾಸ್ ಮಾಡಿ, ಈ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದ. ಇವರನ್ನು ಕಳೆದುಕೊಂಡಿರುವುದು ನಮಗೂ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.