ಇತ್ತೀಚಿಗೆ ಮಾರುಕಟ್ಟೆಯಲ್ಲಿ ತರಕಾರಿಗಳು, ಸೊಪ್ಪು ಬೆಲೆಗಳಲ್ಲಿ ಏರಿಕೆಯಾಗಿದೆ. ಅದರಂತೆ ಟೊಮೊಟೊ ಬೆಲೆಯು ದಿಢೀರ್ ಗಗನಕ್ಕೇರಿದೆ ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ತೈಲ ಬೆಲೆ ಹೆಚ್ಚಾದ ಹಿನ್ನೆಲೆ ಮಾರುಕಟ್ಟೆಗಳಿಗೆ ಇದೀಗ ಅಗತ್ಯ ತರಕಾರಿಗಳ ಬೆಲೆಯೂ ಕೂಡ ಹೆಚ್ಚಾಗುತ್ತಾ ಹೋಗಿದೆ. ಅದರಲ್ಲಿಯೂ ಬೀನ್ಸ್ ಮತ್ತು ಟೊಮೋಟೊ ಬೆಲೆಯು ವಿಪರೀತವಾಗಿ ಹೆಚ್ಚಳವಾಗಿದ್ದು, ಗ್ರಾಹಕರು ಖರೀದಿಸುವ ಮುನ್ನ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಟೊಮೇಟೊ ಹೆಸರುವಾಸಿಯಾಗಿರುವ ಕೋಲಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಟೊಮೋಟೊ ಪೂರೈಕೆ ಆಗುತ್ತಿಲ್ಲ. ಅಂದಾಜು ಮಾರುಕಟ್ಟೆಗೆ ಪ್ರತಿನಿತ್ಯವು 120 ರಿಂದ 140 ಸಾವಿರ ಬರುತ್ತಿದ್ದ ಬಾಕ್ಸ್ ಗಳು ಈಗ 70 – 80 ಸಾವಿರ ಬಾಕ್ಸ್ ಗಳಷ್ಟೇ ಪೂರೈಕೆಯಾಗುತ್ತಿದೆ. ಅತಿಯಾದ ಮಳೆ ರೋಗ ಬಾದೆಯ ಕಾರಣ ರೈತರು ಟೊಮೇಟೊ ಬೆಳೆಯಲು ಕಷ್ಟವಾಗುತ್ತಿದ್ದು ಪೂರೈಕೆ ಪ್ರಮಾಣದಲ್ಲಿ ಕುಸಿತಗೊಂಡಿದೆ.
ಎರಡು ವಾರಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೋಟೊ ಬೆಲೆ ಕೆಜಿಗೆ 40 – 45 ರೂ ಇತ್ತು. ಆದರೆ ಈಗ ಪ್ರತಿ ಕೆಜಿಗೆ 70 – 80 ಆಗಿದ್ದು, ದಿನ ಬಳಕೆಯಲ್ಲಿ ಉಪಯೋಗವಾಗುವ ಟೊಮೋಟೊ ಬೆಲೆ ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ.
ಕನಕಪುರ, ಮಂಡ್ಯ , ಮದ್ದೂರು ಭಾಗದಿಂದ ಬರುತ್ತಿದ್ದ ತರಕಾರಿಗಳ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇನ್ನೂ ಕೆಲವೊಡೆ ಮಳೆಯ ಕಾರಣ ಸಾಗಾಟದ ಸಮಸ್ಯೆ ಎದುರಾಗಿದೆ. ಹೀಗಾಗಿ ಟೊಮೋಟೊ ಬೆಲೆಯೂ 100-120 ಆದರೂ ಅಚ್ಚರಿಪಡಬೇಕಿಲ್ಲ ಎಂದು ಮಾರುಕಟ್ಟೆ ವರ್ತಕರು ಹೇಳುತ್ತಾರೆ.
ಈ ಬಾರಿ ರಾಜ್ಯಕ್ಕೆ ಬರಗಾಲ ಸಂಭವಿಸಿದ್ದ ಕಾರಣ ಸಾಕಷ್ಟು ಅವಾಂತರಗಳ ಸೃಷ್ಟಿಯಾಗಿದೆ. ಮೆಣಸಿನಕಾಯಿ, ಬೀನ್ಸ್ ದರ ಗಗನಕ್ಕೇರಿದೆ. ಮಳೆ ಕೆಲವು ಬಾರಿ ಸರಿಯಾದ ಪ್ರಮಾಣದಲ್ಲಿ ಆಗಿರಲಿಲ್ಲ ಕಾರಣ ನೀರಿಲ್ಲದೆ ತರಕಾರಿ ಬೆಳೆಗಳು ಬೆಳೆಯಲು ಕಷ್ಟವಾಗಿತ್ತು. ಆದರೆ ಈಗ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ತರಕಾರಿ ಬೆಳೆಗಳು ನಾಶವಾಗುತ್ತಿವೆ.
ಅದರಲ್ಲೂ ಈ ವಾರದಲ್ಲಿ 20 – 30 uh ರೂಪಾಯಿಗಳಲ್ಲಿ ತರಕಾರಿಗಳ ಬೆಲೆ ಏರಿಕೆ ಕಂಡಿದೆ. ಬೀನ್ಸ್ ಪ್ರತಿ ಕೆಜಿಗೆ 170 -180, ಕ್ಯಾರೆಟ್ 80 – 90 ರೂ, ಬೀಟ್ರೂಟ್ 50 – 60 ರೂ, ಮೂಲಂಗಿ 60 – 70 , ಕೊತ್ತಂಬರಿ ಸೊಪ್ಪು ಒಂದು ಕಂತೆಗೆ 20 – 25 ರೂಗೆ ಮಾರಾಟವಾಗುತ್ತಿದೆ.