ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರೇಣುಕಾ ಸ್ವಾಮಿಯ ಇನ್ಸ್ಟಾಗ್ರಾಮ್ ಖಾತೆ(Renuka swamy Instagram Profile) ಯಲ್ಲಿನ ಸಂದೇಶಗಳ ಬಗ್ಗೆ ಮಾಹಿತಿ ಕೋರಿ ಬೆಂಗಳೂರಿನ ಪೊಲೀಸರು ಇನ್ಸ್ಟಾಗ್ರಾಮ್ ಗೆ ಪತ್ರ ಬರೆದಿದ್ದಾರೆ.
ಮೃತ ರೇಣುಕಾ ಸ್ವಾಮಿಯು ದರ್ಶನ್ ಗೆಳತಿ ಪವಿತ್ರ ಗೌಡಗೆ ಗೌತಮ್ ಎಂಬ ನಕಲಿ ಖಾತೆಯಲ್ಲಿ ಅಶ್ಲೀಲವಾಗಿ ಮೆಸೇಜ್ ಕಳಿಸುತ್ತಿದ್ದ ಎಂಬ ಆರೋಪವಿದೆ.
ಈ ಹಿನ್ನಲೆಯಿಂದ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್ ಗೆ ಕರೆತಂದು ದರ್ಶನ್ ಮತ್ತು ಸಹಚರರು ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹತ್ಯೆ ನಡೆಸಿದ ಬಳಿಕ ಕೊಲೆಯಾದ ರೇಣುಕಾ ಸ್ವಾಮಿಯ ಮೊಬೈಲ್ ಫೋನನ್ನು ಸುಮನಹಳ್ಳಿ ಸಮೀಪದ ಮೋರಿಗೆ ಎಸೆದಿದ್ದರು.
ಪ್ರಕರಣದ ಕೇಂದ್ರ ಬಿಂದುವಾದ ಅಶ್ಲೀಲ ಮೆಸೇಜ್ ಗಳನ್ನು ಪಡೆದುಕೊಳ್ಳಲು ಮೊಬೈಲ್ ಸಿಗದ ಕಾರಣ ಹೆಚ್ಚಿನ ವಿಚಾರಣೆ ಮತ್ತು ಸಾಕ್ಷಿಗೋಸ್ಕರ ಬೆಂಗಳೂರಿನ ಪೊಲೀಸರು ರೇಣುಕಾ ಸ್ವಾಮಿಯ Instagram ಖಾತೆಯಲ್ಲಿನ ಸಂದೇಶಗಳ ಬಗ್ಗೆ ಮಾಹಿತಿ ಕೋರಿ ಇನ್ಸ್ಟಾಗ್ರಾಮ್ ಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.