ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿದ್ದರು ನಟ ದರ್ಶನ್ ಅವರ ಬಿಡುಗಡೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟವನ್ನ ನಡೆಸುತ್ತಿದ್ದು, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಟ ದರ್ಶನ್ ಅವರನ್ನು ಜೈಲಿಂದ ಬಿಡುಗಡೆ ಮಾಡಿಸಲು ಹಲವು ಪ್ರಯತ್ನಗಳನ್ನ ಮಾಡುತ್ತಿರುವ ಅವರ ಪತ್ನಿ ವಿಜಯಲಕ್ಷ್ಮೀ ಇಂದು ಡಿಸಿಎಂ, ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿದ್ದಾರೆ. ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಅವರು ಆಗಮಿಸಿದ್ದರು. ದರ್ಶನ್ ಸಹೋದರ ದಿನಕರ್ ತೂಗುದೀಪ ಅವರೂ ಜೊತೆಗೆ ಇದ್ದರು. ಈಗೆರಡು ದಿನಗಳ ಹಿಂದೆ ವಿಜಯಲಕ್ಷ್ಮೀ ಮತ್ತು ದಿನಕರ್ ತೂಗುದೀಪ ಇಬ್ಬರೂ ಪರಪ್ಪನ ಅಗ್ರಹಾರಕ್ಕೆ ತೆರಳಿ ನಟ ದರ್ಶನ್‌ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇಂದು ಇವರಿಬ್ಬರೂ ಡಿಸಿಎಂ ನಿವಾಸಕ್ಕೆ ಆಗಮಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ರಾಮನಗರ ಕರಗದಲ್ಲಿ ಡಿ.ಬಾಸ್ ಕೊಗು
ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ದರ್ಶನ್ ಅಭಿಮಾನಿಗಳು ‘ಡಿ ಬಾಸ್ ಡಿ ಬಾಸ್’ ಎಂದು ಕೂಗಲು ಶುರುಮಾಡಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, ನಟ ದರ್ಶನ್ ಅವರಿಗೆ ಏನಾದರೂ ಅನ್ಯಾಯ ಆಗಿದ್ದರೆ ಅದನ್ನ ಸರಿಪಡಿಸಲು ಪ್ರಯತ್ನಿಸುತ್ತೇನೆ. ಈ ದೇಶದ, ಮಣ್ಣಿನ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು’ ಎಂದು ಹೇಳಿದ್ದರು.
‘ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನನ್ನ ಭೇಟಿಯಾಗಲು ಸಮಯ ಕೇಳಿದ್ದಾರೆ. ಭೇಟಿಯಾಗಿ ಮಾತನಾಡುತ್ತೇನೆ. ಏನಾದರೂ ಸರಿ, ಅನ್ಯಾಯ ಆದವರಿಗೆ ನಾವೆಲ್ಲ ಸೇರಿ ನ್ಯಾಯ ಒದಗಿಸೋಣ. ನೊಂದವರಿಗೆಲ್ಲ ತಾಯಿ ಚಾಮುಂಡೇಶ್ವರಿ ಅನುಗ್ರಹಿಸಲಿ’ ಎಂದು ಹೇಳಿದ್ದರು.
ವಿಜಯಲಕ್ಷ್ಮಿ ಭೇಟಿ ಬಳಿಕ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ
ದರ್ಶನ್ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ ಬಳಿಕ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ನನ್ನ ಭೇಟಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬಂದಿದ್ದರು. ಆದರೆ ನಾನು ಭೇಟಿ ಮಾಡಲು ಒಪ್ಪಲಿಲ್ಲ. ಇಂದು ಬೆಳಗ್ಗೆ ಮನೆಯಲ್ಲಿ ಭೇಟಿಯಾಗುವಂತೆ ಹೇಳಿದ್ದೆ. ಈ ಹಿಂದೆ ದರ್ಶನ್ ಅವರ ಮಗನಿಗೆ ನನ್ನ ಸ್ಕೂಲ್‌ನಲ್ಲಿ ಸೀಟ್ ಕೊಟ್ಟಿದ್ದೆ. ಈಗ ಮತ್ತೆ ನಮ್ಮ ಸ್ಕೂಲ್‌ನಲ್ಲಿ ಸೇರಿಸಿಕೊಡಿ ಎಂದು ಮನವಿ ಮಾಡಲು ಬಂದಿದ್ದರು. ನಮ್ಮ ಪ್ರಿನ್ಸಿಪಾಲ್‌ಗೆ ಹೇಳ್ತೀನಿ ಎಂದು ಹೇಳಿದ್ದೇನೆ.
ಮಗನ ಶಿಕ್ಷಣದ ಬಗ್ಗೆ ಅವರಿಗೆ ಕಾಳಜಿ ಇದೆ. ನಮ್ಮ ಸ್ಕೂಲ್‌ನಲ್ಲಿ ಮಕ್ಕಳ ವರ್ತನೆ ಬಗ್ಗೆ ಪೇರೆಂಟ್ಸ್ ಗಮನಕ್ಕೆ ತರುತ್ತೇವೆ. ಹಾಗೆ ಹಿಂದೆ ದರ್ಶನ್ ಅವರನ್ನು ಕರೆಸಿದ್ದಾರೆ. ಮನೆ ಎದುರಿನ ಶಾಲೆಗೆ ಹೋದ್ರೆ ಹೋಗ್ತಾ ಬರ್ತಾ ಇರಬಹುದು ಎಂದು ಕೇಳಿದ್ದಾರೆ. ಮಕ್ಕಳ ವಿಚಾರ ದೊಡ್ಡದು. ಮಗುಗೆ ಸಹಾಯ ಮಾಡ್ತೀನಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.