Dinesh Gundu Rao: ಬದಲಾಗುತ್ತಿರುವ ಹವಾಮಾನದ ಹಿನ್ನೆಲೆ ರಾಜ್ಯಾದ್ಯಂತ ಡೆಂಗ್ಯೂ ಜ್ವರ ಹೆಚ್ಚಳವಾಗುತ್ತಿದೆ. ಬಿಟ್ಟು ಬಿಟ್ಟು ಬರುತ್ತಿರುವ ಮಳೆ ಮತ್ತು ಜನ ಸ್ವಚ್ಛತೆಯನ್ನು ಕಾಪಾಡಿಕೊಳ್ಳದೆ ಇರುವುದರಿಂದ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಶೇ.59% ರಷ್ಟು ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ಕಳೆದ ವರ್ಷ ಜನವರಿಯಿಂದ ಜೂನ್ ವೇಳೆಗೆ 2003 ಪ್ರಕರಣಗಳು ದಾಖಲಾಗಿತ್ತು. ಆದರೆ ಈ ಬಾರಿ ಜೂನ್ ತಿಂಗಳವರೆಗೆ 5,187 ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟಾರೆಯಲ್ಲಿ ಶೇಕಡ 59 ರಷ್ಟು ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿದೆ. ಎಲ್ಲೆಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ ಹೆಚ್ಚಾಗಿದೆಯೋ ಅಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ಸ್ಲಮ್ ಗಳು ನೀರು ನಿಂತಿರುವ ಜಾಗಗಳಲ್ಲಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಬೆಂಗಳೂರಿನಲ್ಲಿ 2,457 ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಜ್ವರ, ತಲೆನೋವು, ಮೈ ಕೈ ನೋವು ಸೇರಿದಂತೆ ಡೆಂಗ್ಯೂ ರೋಗ ಲಕ್ಷಣವುಳ್ಳ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ “ಡೆಂಗ್ಯೂ ಪೀಡಿತರಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು. ನೀರು ನಿಂತರೆ ಡೆಂಗ್ಯೂ ಹರಡುವ ಸೊಳ್ಳೆಗಳು ಹೆಚ್ಚಾಗುತ್ತವೆ. ಹಾಗಾಗಿ ಮನೆಯ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಸಾರ್ವಜನಿಕರು ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಬೇಕು” ಎಂದು ಹೇಳಿದರು.