ರೈತ ದೇಶದ ಬೆನ್ನೆಲುಬು, ಇಡೀ ದೇಶಕ್ಕೆ ಅನ್ನ ಹಾಕುವ ಶಕ್ತಿ ರೈತನಿಗೆ ಮಾತ್ರ ಇರುವುದು. ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ರೈತರಿಗೆ ಮಾಲ್, ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ನಿರಾಕರಣೆ ಮಾಡಿ ಅವಮಾನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ಬೆಂಗಳೂರಿನ ಜಿ.ಟಿ ಮಾಲ್ ನಲ್ಲಿ ಪಂಚೇ ಧರಿಸಿದ್ದಕ್ಕೆ ರೈತನಿಗೆ ಮಾಲ್ ಪ್ರವೇಶ ನಿರಾಕರಣೆ ಮಾಡಿ ಅಪಮಾನ ಮಾಡಿರುವುದು ಬೆಳಕಿಗೆ ಬಂದಿದೆ.
ಈ ವಿಷಯ ತಿಳಿದ ತಕ್ಷಣ ಧರ್ಮರಾಜಗೌಡ ಎಂಬುವವರು ಕೆ.ಪಿ ಅಗ್ರಹಾರ ಠಾಣೆಯಲ್ಲಿ (KP Agrahara Police) ಪ್ರಕರಣ ದಾಖಲಿಸಿದ್ದಾರೆ. ಮಾಲ್ ಮಾಲೀಕರು ಹಾಗೂ ಸೆಕ್ಯುರಿಟಿ ಅರುಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರು ಪಡೆದು ಕೆ.ಪಿ ಅಗ್ರಹಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ 126(2) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ ನಲ್ಲಿ ಈ ಘಟನೆ ನಡೆದಿದೆ. ಹಾವೇರಿಯ ಫಕೀರಪ್ಪ ಎಂಬ ರೈತರಿಗೆ ಮಾಲ್ ನ ಸಿಬ್ಬಂದಿ ಅಪಮಾನಿಸಿದ್ದಾರೆ. ನಾಗರಾಜ್ ಎಂಬುವವರು ತಮ್ಮ ತಂದೆ ಫಕೀರಪ್ಪರನ್ನ ಮಾಲ್ ನಲ್ಲಿ ಸಿನಿಮಾ ತೋರಿಸಲು ಕರೆದುಕೊಂಡು ಬಂದಿದ್ದರು. ಟಿ ಮಾಲ್ ಒಳಗೆ ಬಿಡದೇ ಸಿಬ್ಬಂದಿ ದರ್ಪ ತೋರಿದ ಘಟನೆ ಮಂಗಳವಾರ ನಡೆದಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ, ಮಾಲ್ ಸಿಬ್ಬಂದಿ, ಆಡಳಿತದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಮಾಲ್ ಮಾಲೀಕರು ರೈತನಿಗೆ ಕ್ಷಮೆಯಾಚಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು. ಅದಲ್ಲದೇ ಘಟನೆಯನ್ನು ಖಂಡಿಸಿ, ಇಂದು ಕನ್ನಡಪರ ಹೋರಾಟಗಾರರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಘಟನೆಯ ಹಿನ್ನೆಲೆ..?
ಹಾವೇರಿ ಮೂಲದ ನಾಗರಾಜ್ ಎಂಬವರು ತಂದೆ ತಾಯಿಗೆ ಸಿನಿಮಾ ತೋರಿಸಲು ಅವರನ್ನು ಜಿ.ಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದರು.ತಂದೆ ಪಂಚೆ ಧರಿಸಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಪಂಚೆ ಧರಿಸಿದರಿಗೆ ಮಾಲ್ ಒಳಗೆ ಬಿಡುವುದಿಲ್ಲ, ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಸಿಬ್ಬಂದಿ ಹೇಳಿದ್ದಾರೆ. ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಮಾಲ್ ಒಳಗೂ ಬಿಡದೇ ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿ ಅವಮಾನ ಮಾಡಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ.
ನಾಗರಾಜ್ ಅವರ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ರೈತರು. ರೈತನಿಗೆ ಮಾಲ್ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲವು ಯೂಟ್ಯೂಬರ್ಸ್ ವೀಡಿಯೊ ಮಾಡಲು ಶುರು ಮಾಡಿದ ಬಳಿಕ ರೈತನಿಗೆ ಮಾಲ್ ಒಳಗೆ ಪ್ರವೇಶ ನೀಡಿದ್ದಾರೆ ಎಂದು ಪುತ್ರ ನಾಗರಾಜ್ ತಿಳಿಸಿದ್ದಾರೆ.
ಅವಮಾನ ಮಾಡಿದವರಿಂದ ರೈತನಿಗೆ ಸನ್ಮಾನ:
ಪ್ರತಿಭಟನೆ ಬೆನ್ನಲ್ಲೇ ಮಾಲ್ ಸಿಬ್ಬಂದಿ, ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು, ಪಂಚೆಯಲ್ಲೇ ಬಂದ ರೈತ ಫಕೀರಪ್ಪ ಅವರಿಗೆ ಆಡಳಿತಾಧಿಕಾರಿಗಳು ಒಳಗಡೆ ಕರೆಯಿಸಿ ಸನ್ಮಾನಿಸಿ, ಕ್ಷಮೆಯಾಚಿಸಿದ್ದಾರೆ.