ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಪ್ರತಿದಿನ ಮೊಟ್ಟೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಅಜೀಮ್ ಪ್ರೇಮ್ ಜೀ ಅನುದಾನವೂ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರ ಮೊಟ್ಟೆ ವಿತರಿಸುವ ವಾರದ ಎರಡು ದಿನ ಬಿಟ್ಟು ಉಳಿದ ನಾಲ್ಕು ದಿನವೂ ಮೊಟ್ಟೆ ನೀಡಲು ತಗಲುವ ಆರ್ಥಿಕ ನೆರವನ್ನು ಬರಿಸಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ಮುಂದೆ ಬಂದಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಫೌಂಡೇಶನ್ ಸಂಸ್ಥಾಪಕ ಅಜೀಂ ಪ್ರೇಮ್ ಜೀ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್ ಜೀ ಫೌಂಡೇಶನ್ ನಡುವೆ MOU ಆಗಿದೆ. ಒಪ್ಪಂದದ ಪ್ರಕಾರ 1500 ಕೋಟಿ ರೂ. ಖರ್ಚು ಮಾಡಿ 3 ವರ್ಷಗಳ ಅವಧಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈಗಾಗಲೇ ನಾವು ಎರಡು ದಿನ ಮೊಟ್ಟೆ ಕೊಡ್ತಿದ್ದೇವೆ. ಮೊದಲು ಒಂದು ದಿನ ಇತ್ತು ನಾವು ಎರಡು ದಿನ ಕೊಡ್ತಿದ್ದೇವೆ. ಈಗ ಪ್ರೇಮ್ ಜೀ ದೊಡ್ಡ ಮನಸ್ಸು ಮಾಡಿ ಉಳಿದ 4 ದಿನ ಮೊಟ್ಟೆ ನೀಡುತ್ತಿದ್ದಾರೆ. 55-56 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಮೊಟ್ಟೆಯನ್ನ 3 ವರ್ಷ ಕೊಡಲಾಗುತ್ತದೆ. ಪ್ರೇಮ್ ಜೀ ಮತ್ತು ಕುಟುಂಬ ವರ್ಗದವರಿಗೆ ಸರ್ಕಾರದ ವತಿಯಿಂದ, ನನ್ನ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 60 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲು ಪ್ರಸ್ತುತ ಸರ್ಕಾರದಿಂದ 300 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಈ ಪೈಕಿ ಮೊಟ್ಟೆ ತಿನ್ನಲು ನಿರಾಕರಿಸಿರುವ ಶೇ.30ರಷ್ಟು ಮಕ್ಕಳಿಗೆ ಬಾಳೆಹಣ್ಣು/ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ.