ಸ್ಯಾಂಡಲ್ ವುಡ್ ಖ್ಯಾತ ನಟ ರಕ್ಷಿತ್ ಶೆಟ್ಟಿ(Rakshit Shetty) ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪಿರೈಟ್ ಉಲ್ಲಂಘನೆಯ ಆರೋಪದ ಅಡಿಯಲ್ಲಿ ರಕ್ಷಿತ್ ಶೆಟ್ಟಿ ವಿರುದ್ಧ FIR ದಾಖಲಾಗಿದೆ.
ಇತ್ತೀಚಿಗೆ ತೆರೆಕಂಡ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಿದ್ದಾಗಿ ನವೀನ್ ಎಂಬುವವರು ದೂರು ದಾಖಲಿಸಿದ್ದಾರೆ. ಎರಡು ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ.
ಎರಡು ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ತಮ್ಮ ಚಿತ್ರಕ್ಕೆ ಬಳಸಿಕೊಂಡ ಕಾರಣ ರಕ್ಷಿತ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಪೊಲೀಸರು ಈ ಕುರಿತು ರಕ್ಷಿತ್ ಶೆಟ್ಟಿ ಜೊತೆ ಚರ್ಚೆ ನಡೆಸಿದ್ದು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ನವೀನ್ ಕುಮಾರ್ ಅವರು ಎಂಆರ್ಟಿ ಮ್ಯೂಸಿಕ್ನ ಪಾಲುದಾರಿಕೆ ಹೊಂದಿದ್ದು. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಬಳಕೆ ಆದ ‘ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಚಿತ್ರದ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಾಡುಗಳ ಬಳಕೆಗಾಗಿ ರಕ್ಷಿತ್ ಶೆಟ್ಟಿ ಅವರು 2024ರ ಜನವರಿಯಲ್ಲಿ ಮಾತುಕತೆ ನಡೆಸಿದ್ದರು, ಹಾಡು ಬಳಕೆಗೆ ಮಾತುಕತೆ ಸರಿಹೊಂದದ ಕಾರಣ ಹಾಡಿನ ಬಳಕೆ ಕುರಿತು ಯಾವುದೇ ನಿರ್ಧಾರವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಮಾರ್ಚ್ ತಿಂಗಳಲ್ಲಿ ಬ್ಯಾಚುಲರ್ ಪಾರ್ಟಿ ಚಿತ್ರವು ಬಿಡುಗಡೆಯಾದಾಗ ಹಾಡಿನ ಬಳಕೆಯ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಪರಮ್ವಾ ಸ್ಟುಡಿಯೋಸ್ ಹಾಗೂ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.