ಜಿಟಿ ಮಾಲ್ ನಲ್ಲಿ ಇತ್ತೀಚೆಗೆ ಪಂಚೆ ಉಟ್ಟುಕೊಂಡು ಬಂದ ಕಾರಣಕ್ಕೆ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಘಟನೆ ಈಗ ಸದನದಲ್ಲೂ ಪ್ರಸ್ತಾಪವಾಗಿದೆ. ಈ ಬಗ್ಗೆ ಎಲ್ಲಾ ಶಾಸಕರೂ ಪ್ರಸ್ತಾಪ ಮಾಡಿದ್ದು, ಜಿಟಿ ಮಾಲ್ ನ್ನು 7 ದಿನಗಳ ಕಾಲ ಬಂದ್ ಮಾಡಲು ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾಹಿತಿ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ರೈತರೊಬ್ಬರು ಪಂಚೆ ಉಟ್ಟುಕೊಂಡು ತಮ್ಮ ಮಗನ ಜೊತೆ ಸಿನಿಮಾ ನೋಡಲು ಜಿಟಿ ಮಾಲ್ ಗೆ ಬಂದಿದ್ದಾಗ ಅವರ ಡ್ರೆಸ್ ನೋಡಿ ಒಳಗೆ ಬಿಟ್ಟುಕೊಳ್ಳದೇ ಮಾಲ್ ಸಿಬ್ಬಂದಿ ಅವಮಾನಿಸಿದ್ದರು. ಈ ಬಗ್ಗೆ ಅವರ ಪುತ್ರ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಲವಾರು ಕನ್ನಡ ಸಂಘಟನೆಗಳು ಮಾಲ್ ವಿರುದ್ಧ ಪ್ರತಿಭಟನೆ ನಡೆಸಿದರು. ಇಷ್ಟೇ ಅಲ್ಲದೆ ರೈತನನ್ನು ಕರೆದುಕೊಂಡು ಮಾಲ್ ಸಿಬ್ಬಂದಿಯಿಂದ ಕ್ಷಮೆ ಕೇಳಿಸಿ ಸನ್ಮಾನಿಸಿ ಕಳುಹಿಸಿದ್ದರು.
ಇಂದು ಸದನದಲ್ಲೂ ಈ ವಿಚಾರ ಚರ್ಚೆಯಾಗಿದೆ. ಈ ಮಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಶಾಸಕರಿಂದ ಒತ್ತಾಯ ಕೇಳಿಬಂತು. ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನ್ನು 7 ದಿನಗಳ ಕಾಲ ಬಂದ್ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.