Railway Exam in Kannada: ಕನ್ನಡಿಗರಿಗೆ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಸಿಹಿಸುದ್ದಿ ನೀಡಿದ್ದು, ಮುಂಬರುವ ದಿನಗಳಲ್ಲಿ ರೈಲ್ವೆ ಇಲಾಖೆಯ ಎಲ್ಲಾ ನೇಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸುವಂತೆ ರೈಲ್ವೆ ಮಂಡಳಿ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೈಋತ್ಯ ರೈಲ್ವೇ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ರೈಲ್ವೇ ಇಲಾಖೆ, ನೈಋತ್ಯ ರೈಲ್ವೇ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಮುಂದೂಡಿ, ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದೆ. ಇದಕ್ಕೆ ಸಂಬಂಧಿಸಿದ ಆದೇಶ ಶೀಘ್ರದಲ್ಲಿ ಹೊರಬರಲಿದೆ ಎಂದರು.
ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ‘ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆ’ (ಜಿಡಿಸಿಇ) ಬರೆಯಲು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಕನ್ನಡದಲ್ಲಿಯೂ ಅವಕಾಶ ಇರಬೇಕು ಎಂದು ಒತ್ತಾಯ ಬಂದಿರುವುದರಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಿದರು.