ಮುಂಗಾರು ಅಧಿವೇಶನದ ಕಲಾಪದಲ್ಲಿ ಹಾಸನದ ಪ್ರಜ್ವಲ್ ರೇವಣ್ಣ(HD Revanna)ನವರ ಲೈಂಗಿಕ ಪ್ರಕರಣ ಸದ್ದು ಮಾಡಿದೆ. ಸದನದಲ್ಲಿ ಈ ಕುರಿತು ಮಾತನಾಡಿರುವ ಶಾಸಕ ಎಚ್ ಡಿ ರೇವಣ್ಣ ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಆದರೆ ಸರ್ಕಾರ ವಿನಾಕಾರಣ ನನ್ನ ಮೇಲೆ ಕೇಸ್ ಹಾಕುವುದು ಯಾಕೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಿಯಮ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಆದರೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಆರೋಪ ಎದುರಿಸುತ್ತಿರುವವರ ವಿರುದ್ಧ ಅಷ್ಟೇ ಆಸಕ್ತಿಯಿಂದ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಎಚ್ ಡಿ ರೇವಣ್ಣ ಮಾತನಾಡಿ, ನನ್ನ ಮಗ ತಪ್ಪು ಮಾಡಿದರೆ ಗಲ್ಲಿಗೆ ಹಾಕಿ. ನಾನು ಇಲ್ಲಿ ನನ್ನ ವಿಚಾರಗಳನ್ನು ಸಮರ್ಥನೆ ಮಾಡಿಕೊಳ್ಳಲು ಅಥವಾ ಚರ್ಚೆ ಮಾಡಲು ಬಂದಿಲ್ಲ. ನನ್ನ ಮೇಲೆ ಯಾರೋ ಹೆಣ್ಣು ಮಕ್ಕಳನ್ನು ಕರೆಸಿಕೊಂಡು ಡಿಜಿ ಕಚೇರಿಯಲ್ಲಿ ದೂರು ಬರೆಸಿಕೊಳ್ಳುತ್ತಾರೆ. ಡಿಜಿ ಆಗಲು ಯೋಗ್ಯನಾ ಅವನು? ಇದು ನೀಚ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೇವಣ್ಣ ಅವರು ಅಧಿಕಾರಿಗಳ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಿಜವಾಗಿಯೂ ಅನ್ಯಾಯವಾಗಿದ್ದರೆ ನೋಟಿಸ್ ಕೊಟ್ಟು ಚರ್ಚೆ ಮಾಡಲಿ. ಅದಕ್ಕೆ ಸೂಕ್ತ ಉತ್ತರವನ್ನು ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದರು.