ಸಾರಿಗೆ ಬಸ್‍ಗಳಲ್ಲಿ ಇನ್ನು ಮುಂದೆ ಚಾಲಕರು ಅಥವಾ ನಿರ್ವಾಹಕರು ಅನಪೇಕ್ಷಣಿಯವಾಗಿ ಮೊಬೈಲ್ ಬಳಕೆ ಹಾಗೂ ರೀಲ್ಸ್ (Reels) ಗಳನ್ನು ಮಾಡಿದರೆ ಸೇವೆಯಿಂದ ಅಮಾನತ್ತುಗೊಳಿಸುವ ಎಚ್ಚರಿಕೆಯನ್ನು ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ (KSRTC, BMTC, NWKRTC, KKRTC) ಸಿಬ್ಬಂದಿಗಳು ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡಲು ಹೆಚ್ಚಿನ ಗಮನಹರಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಬಸ್‌ಗಳಲ್ಲಿ ಇನ್ಮುಂದೆ ಯಾರೆಲ್ಲಾ ಡ್ರೈವರ್, ಕಂಡಕ್ಟರ್ ಮೊಬೈಲ್ ಬಳಕೆ ಮಾಡುವುದು ಹಾಗೂ ಅದರಿಂದ ರೀಲ್ಸ್ ಮಾಡುವುದು ಮಾಡಿದ್ರೆ, ಅವರನ್ನು ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಕಳೆದ ಮೇ ತಿಂಗಳಲ್ಲಿ ಚಾಲಕ ಛತ್ರಿ ಹಿಡಿದುಕೊಂಡು ಬಸ್ ಓಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಧಾರವಾಡ ಘಟಕದ ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕರಾಗಿ ಅನಿತಾ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ಮಳೆ ಬರುತ್ತಿದ್ದಾಗ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದಾಗ ಚಾಲಕ ಹನುಮಂತಪ್ಪ ಛತ್ರಿ ಹಿಡಿದು ಬಸ್ ಚಲಾಯಿಸಿದ್ದರು. ಛತ್ರಿ ಹಿಡಿದು ಚಾಲನೆ ಮಾಡುತ್ತಿದ್ದ ದೃಶ್ಯವನ್ನು ನಿರ್ವಾಹಕಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಅಗಿ ಕರ್ನಾಟಕ ಬಿಜೆಪಿ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿದ್ದು ಕರ್ನಾಟಕದ ಸರ್ಕಾರದಿಂದ ಛತ್ರಿ ಭಾಗ್ಯಕ್ಕೆ ಚಾಲನೆ ಎಂದು ಸರ್ಕಾರವನ್ನು ಟೀಕಿಸಿತ್ತು.
ಈ ಕಾರಣ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ನಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನಿಖೆ ನಡೆಸಿ, ಇದು ಮನರಂಜನೆಗಾಗಿ ಮಾಡಿದ ವಿಡಿಯೋ ಎಂದು ಸ್ಪಷ್ಟನೆ ನೀಡಿತ್ತು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೀಲ್ಸ್ ಮಾಡಿದವರು ಕೆಲಸದಲ್ಲಿ ಇರಲು ಲಾಯಕ್ ಇಲ್ಲ. ಕರ್ತವ್ಯದಲ್ಲಿದ್ದ ವೇಳೆ ರೀಲ್ಸ್ ಮಾಡಿದರೆ ಅಂತವರನ್ನು ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು ಎಂದು ಹೇಳಿದರು.