ಇಂದಿನಿಂದ‌ ವಿಧಾನ‌ ಮಂಡಲ ಅಧಿವೇಶನ ಪ್ರಾರಂಭ; ಕದನಕ್ಕೆ ಅಖಾಡ ಸಜ್ಜು

By Aishwarya

Published On:

Follow Us

ಇಂದಿನಿಂದ ರಾಜ್ಯದಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಒಟ್ಟು ಒಂಬತ್ತು ದಿನಗಳ ಕಾಲ ಕಲಾಪ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 14 ತಿಂಗಳು ಪೂರೈಸಿದ್ದು ರಾಜ್ಯದ ಅನೇಕ ವಿಚಾರಗಳನ್ನು ಕುರಿತು ಈ ವಿಧಾನ ಮಂಡಲದಲ್ಲಿ ಚರ್ಚೆ ಆಗುತ್ತದೆ. ಕಳೆದ ಅಧಿವೇಶನಗಳಿಗಿಂತ ಈ ಬಾರಿಯ ಕಲಾಪುವು ಹೆಚ್ಚು ಕುತೂಹಲ ಮೂಡಿಸಿದೆ ಕಾರಣ ಸರ್ಕಾರದ ಮೇಲೆ ಸಾಲು ಸಾಲು ಹಗರಣ ಆರೋಪಗಳು ಕೇಳಿ ಬಂದಿದ್ದು, ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಗಿರುವ ಕಾರಣ ಜಂಟಿಯಾಗಿ ಸರ್ಕಾರವನ್ನು ಜಟಾಪಟಿಗೆ ತೆಗೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತವೆ. ಅಧಿವೇಶನ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಸರ್ಕಾರದ ಅನೇಕ ಹಗರಣಗಳ ಆರೋಪವು ಕೇಳಿ ಬರುತ್ತಿದ್ದು ಪ್ರತಿಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಈ ಅಸ್ತ್ರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುವ ನಿರೀಕ್ಷೆ ಇದೆ.

9 ದಿನಗಳ ಕಾಲ ನಡೆಯುವ ಕಲಾಪದಲ್ಲಿ ವಿರೋಧಪಕ್ಷಗಳು ಸರ್ಕಾರದ ವೈಫಲ್ಯಗಳು ಮತ್ತು ಹಗರಣಗಳನ್ನು ಗಟ್ಟಿ ಧ್ವನಿಯಲ್ಲಿ ಗರ್ಜಿಸುವ ಸಾಧ್ಯತೆ ಇದೆ. ಇವುಗಳಿಗೆ ಪ್ರತ್ಯುತ್ತರ ನೀಡಲು ಸರ್ಕಾರವು ಕೂಡ ಈಗಾಗಲೇ ಸಭೆ ನಡೆಸಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರು ಮೂಡಾ ಅಕ್ರಮ ಸೈಟು ಹಂಚಿಕೆ ವಿಚಾರ, ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮಣ ವರ್ಗಾವಣೆ, ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ)  ಗಳ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿರುವ ಆರೋಪ, ರೈತರ ಆತ್ಮಹತ್ಯೆ, ಡೆಂಗ್ಯೂ ನಿಯಂತ್ರಿಸುವಲ್ಲಿ ವೈಫಲ್ಯ, ವರ್ಗಾವಣೆ ದಂದೆ, ಈ ವಿಷಯಗಳನ್ನು ಇಟ್ಟುಕೊಂಡು ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಸಿದ್ಧತೆಯನ್ನು ವಿರೋಧ ಪಕ್ಷಗಳು ಮಾಡಿಕೊಂಡಿವೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ವಿಚಾರವು ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಬಳ್ಳಾರಿ ಗ್ರಾಮೀಣ ಶಾಸಕ ಹಾಗೂ ಮಾಜಿ ಸಚಿವರಾದ ನಾಗೇಂದ್ರ ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಳೆದ ಶುಕ್ರವಾರ ಇಡಿ ಬಂಧಿಸಿದೆ‌. ವಾಲ್ಮೀಕಿ ನಿಗಮದ ಅಧ್ಯಕ್ಷರಾದ ಶಾಸಕ ಬಸನಗೌಡ ದದ್ದಲ್‌ ಪ್ರಕರಣ ಹೊರ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಈ ಎಲ್ಲಾ ಬಳವಣಿಗೆಗಳು ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ದೂರವ ಲಕ್ಷಣಗಳು ಕಾಣಿಸುತ್ತಿವೆ. ಈ ಅಕ್ರಮ ಹಣ ವರ್ಗಾವಣೆಯನ್ನು ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎಂಬ ಆರೋಪವನ್ನೇ ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಲು ಬಿಜೆಪಿ, ಜೆಡಿಎಸ್‌ ವಿಧಾನಮಂಡಲದೊಳಗೆ ಹೋರಾಟಕ್ಕೆ ಸಜ್ಜಾಗಿವೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಗ್ಯಾರೆಂಟಿ ಯೋಚನೆಗಳು ಸರ್ಕಾರದ ಖಜಾನೆಯಲ್ಲಿರುವ ಎಲ್ಲಾ ಹಣವನ್ನು ಖಾಲಿ ಮಾಡಿದೆ. ಇದಲ್ಲದೆ ವಿವಿಧ ಅಭಿವೃದ್ಧಿ ನಿಗಮದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಈಗಾಗಲೇ ಸರ್ಕಾರದ ಮೇಲೆ ಆರೋಪ ನಡೆಸುತ್ತಿದ್ದು, ಈ ಕಲಾಪದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತೀವ್ರ ಚರ್ಚೆಯಾಗುವ ಸಂಭವವಿದೆ.

ಎಲ್ಲಾ ಕಾರಣಗಳಿಗೆ ಇಂದಿನಿಂದ ನಡೆಯುವ ಅಧಿವೇಶನವು ತೀವ್ರ ಕುತೂಹಲ ಮೂಡಿಸಿದ್ದು ಜೆಡಿಎಸ್ ಬಿಜೆಪಿ ಜಂಟಿಯಾಗಿರುವ ಕಾರಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಲಕ್ಷಣಗಳು ಕಾಣಿಸುತ್ತವೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow