ಕೇಂದ್ರ ಸರ್ಕಾರವು ಜೂನ್ 25ರಂದು “ಸಂವಿಧಾನ ಹತ್ಯೆ ದಿನ”(Constitution Killing Day on June 25) ಎಂದು ಘೋಷಣೆ ಮಾಡಿ ಈ ಬಗ್ಗೆ ಅಧಿಸೂಚನೆಯನ್ನು ಕೂಡ ಹೊರಡಿಸಿದೆ.
1975ರಲ್ಲಿ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಜೂನ್ 25ರಂದು ದೇಶದ ಮೇಲೆ ತುರ್ತು ಪರಿಸ್ಥಿತಿ ವಿಧಿಸಿದರು. ಈ ದಿನವನ್ನು ಸಂವಿಧಾನ ಹತ್ಯೆ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತು ದೇಶದ ಗೃಹ ಸಚಿವರಾದ ಅಮಿತ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತ ಅಧಿಸೂಚನೆಯ ಜೊತೆಗೆ “ಸಂವಿಧಾನ ಹತ್ಯೆ ದಿನದ” ಕುರಿತು ಬರೆದುಕೊಂಡಿದ್ದಾರೆ.
ತುರ್ತು ಪರಿಸ್ಥಿತಿ ಸಮಯದಲ್ಲಿ ದೇಶದ ಪರಿಸ್ಥಿತಿ, ಅಂದು ನೋವನ್ನು ಸಹಿಸಿಕೊಂಡು ಅಪಾರ ಕೊಡುಗೆಯನ್ನು ನೆನೆಸಿಕೊಳ್ಳಲು ಈ ದಿನವನ್ನು ನಾವು ಆಚರಿಸಬೇಕಿದೆ. ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ಸರ್ವಾಧಿಕಾರಿ ಧೋರಣೆಯ ಮೂಲಕ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಪ್ರಜಾಪ್ರಭುತ್ವದ ಆತ್ಮದ ಕುತ್ತಿಗೆಯನ್ನು ಇಸುಕಿದರು. ಈ ಸಮಯದಲ್ಲಿ ಪ್ರತಿಪಕ್ಷದ ನಾಯಕರನ್ನು ವಿನಾಕಾರಣ ಜೈಲಿಗೆ ಹಾಕಲಾಯಿತು. ಅದಲ್ಲದೆ ತಮ್ಮ ವಿರುದ್ಧ ಯಾರೇ ಮಾತನಾಡಿದರು ಅವರನ್ನು ಜೈಲಿಗೆ ಹಾಕಲಾಗುತ್ತಿತ್ತು. ಮಾಧ್ಯಮಗಳ ಬಾಯಿ ಮುಚ್ಚಿಸಿ ಪತ್ರಿಕೆಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಇದನ್ನೆಲ್ಲಾ ನೆನಪಿಸಿಕೊಳ್ಳಲು ನಾವು ಸಂವಿಧಾನ ಹತ್ಯೆ ದಿನ ಆಚರಿಸಲು ನಿರ್ಧರಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಪ್ರಜಾಪ್ರಭುತ್ವವನ್ನು ರಕ್ಷಿಸಲು ವೈಯಕ್ತಿಕ ಸ್ವಾತಂತ್ರದ ಅಮರ ಜ್ವಾಲೆ ಉರಿಸಲು ಸಂವಿಧಾನ ಹತ್ಯೆ ದಿನ ನೆರವಾಗುತ್ತದೆ. ಇದರಿಂದ ಕಾಂಗ್ರೆಸ್ ನಂತಹ ಸರ್ವಾಧಿಕಾರಿ ಮನಸ್ಥಿತಿ ಪುನರಾವರ್ತನೆ ಆಗುವುದಿಲ್ಲ ಎಂದು ಕಾಂಗ್ರೆಸ್ಸಿನ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.