ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲು ಇಂದು (ಜುಲೈ 26) ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಾಯಿಸಲು ತೀರ್ಮಾನಿಸಲಾಗಿದೆ ತಿಳಿಸಿದರು.
“ಜನರ ಬೇಡಿಕೆ ಮೇಲೆ ಈ ನಿರ್ಣಯ ಮಾಡಲಾಗಿದ್ದು, ಬ್ರ್ಯಾಂಡ್ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ. ರಾಮನಗರ ಜಿಲ್ಲೆಯ ಹೆಸರು ಮಾತ್ರ ಬದಲಾವಣೆ ಆಗಲಿದೆ. ಅದನ್ನು ಹೊರತುಪಡಿಸಿ ಉಳಿದ ಎಲ್ಲವೂ ಈಗ ಇರುವಂತೆ ಇರಲಿದೆ” ಎಂದು ಹೇಳಿದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ನಿಯೋಗ ಭೇಟಿಯಾಗಿತ್ತು. ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿತ್ತು. ಇದೀಗ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.