ರಾಜ್ಯದಲ್ಲಿ ಡೆಂಗ್ಯೂ ಹಾವಳಿಯು ಹೆಚ್ಚಾಗುತ್ತಿದ್ದು,ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು(Dengue Fever) ಏರಿಕೆ ಆಗುತ್ತಿದೆ. ಗುರುವಾರ ಒಂದೇ ದಿನ ನಗರದಲ್ಲಿ 524 ಪ್ರಕರಣಗಳು ವರದಿಯಾಗಿವೆ. ಡೆಂಗ್ಯೂ ತಡೆಗಟ್ಟಲು ಬಿಬಿಎಂಪಿ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದು ಇದರ ಜೊತೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ಮುಂದಾಗಿದೆ. ಇದಕ್ಕಾಗಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ 1 ಲಕ್ಷ ರೂ. ಬಂಪರ್ ಬಹುಮಾನ ಘೋಷಿಸಿದೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸಮಾಜದ ಮೇಲೆ ಬಹಳ ಪ್ರಭಾವ ಬೀರಿದ್ದು, ಇದನ್ನು ಗುರುತಿಸಿದ ಬಿಬಿಎಂಪಿ ಸಾಮಾಜಿಕ ಜಾಲತಾಣದ ಮೂಲಕ ಜನರಲ್ಲಿ ಡೆಂಗ್ಯೂ ಜಾಗೃತಿ ಮೂಡಿಸುವ ರೀಲ್ಸ್ ಮೊರೆ ಹೋಗಿದೆ. ಮೊದಲ ಐದು ಉತ್ತಮ ರೀಲ್ಸ್ಗಳಿಗೆ ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ದ್ವೀತಿಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಮಾಡಿದ್ದು, ಯಾವ ಶಾಲೆ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಇಷ್ಟೇ ಅಲ್ಲದೆ ಮಕ್ಕಳಿಗೆ ರೀಲ್ಸ್ ಮಾಡಲು ಉತ್ತೇಜಿಸುವ ಶಿಕ್ಷಕರಿಗೂ 25 ಸಾವಿರ ಬಹುಮಾನವನ್ನು ಪಾಲಿಕೆಯು ಘೋಷಣೆ ಮಾಡಿದೆ.
ಈ ರೀಲ್ಸ್ ಸ್ಪರ್ಧೆಗೆ ಸೋಷಿಯಲ್ ಮೀಡಿಯಾ ಬಳಸಿಕೊಳ್ಳುತ್ತಿರುವ ಪಾಲಿಕೆಯ ಆರೋಗ್ಯ ವಿಭಾಗ, ರೀಲ್ಸ್ ಹಂಚಿಕೊಂಡ ಪ್ರತಿಯೊಬ್ಬರಿಗೂ ಡೆಂಗ್ಯೂ ವಾರಿಯರ್ ಎಂಬ ಪಟ್ಟ ನೀಡುತ್ತಿದೆ. ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಪರ ವಿರೋಧ ಚರ್ಚೆಯಾಗುತ್ತಿದ್ದು, ಲಕ್ಷಗಟ್ಟಲೆ ಬಹುಮಾನ ನೀಡುವ ಬದಲು ಸೊಳ್ಳೆ ನಿಯಂತ್ರಿಸಲು ಕ್ರಮ ತೆಗೆದುಕೊಂಡಿದ್ದರೆ ಉಪಯೋಗ ಆಗುತ್ತಿತ್ತು ಎಂದು ಜನರು ಸಲಹೆ ನೀಡುತ್ತಿದ್ದಾರೆ.