ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ ಜುಲೈ 16ರಂದು ಸಂಭವಿಸಿದ್ದ ಗುಡ್ಡ ಕುಸಿತದಿಂದ ಮಣ್ಣು ತೆರೆವು ಬರದಿಂದ ಸಾಗುತ್ತಿದೆ. ಮೊಬೈಲ್ ಸ್ವಿಚ್ ಆನ್ ಆಗಿರುವ ಲಾರಿ ಚಾಲಕ ಸೇರಿದಂತೆ ಇತರರಿಗಾಗಿ ಶೋಧ ನಡೆಸಲಾಗುತ್ತಿದೆ.
ಕಡೆದ 10 ದಿನಗಳಿಂದ ಕಾರ್ಯಾಚರಣೆಯು ನಡೆಯುತ್ತಿದ್ದು, ಈ ದುರಂತದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದು ಇದುವರೆಗೆ ಏಳು ಮಂದಿಯ ಶವ ಪತ್ತೆಯಾಗಿದೆ. ಮಣ್ಣಿನಲ್ಲಿ ಅದಗಿರುವ ಕೇರಳದ ಲಾರಿ ಪತ್ತೆಯಾಗಿದ್ದು ಅದನ್ನು ಮೇಲೆತ್ತಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬೂಮ್ ಹಿಟಾಚಿ ಲಾರಿಯ ಇರುವಿಕೆ ಸುಳಿವು ನೀಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ NDRF ಸಿಬ್ಬಂದಿ ಲಾರಿ ಇರುವಿಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳಾದ ಲಕ್ಷ್ಮಿ ಪ್ರಿಯ ಅವರು ಬೋಟ್ ನಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿದ್ದಾರೆ.
ಶಿರೂರು ಭೂಕುಸಿತದಲ್ಲಿ ಸಿಲುಕಿರುವವರ ಹುಡುಕಾಟಕ್ಕೆ ಬೂಮ್ ಎಕ್ಸ್‌ಕಾವೇಟರ್ ಅಥವಾ ಬೂಮ್ ಪೊಕ್ಲೇನ್ ಯಂತ್ರವನ್ನು ಬೆಳಗಾವಿಯಿಂದ ಬುಧವಾರ ತರಿಸಲಾಗಿತ್ತು. ಬೂಮ್ ಪೊಕ್ಲೇನ್ ಯಂತ್ರವು ಶಿರೂರಿಗೆ ತಂದ ದಿನವೇ ನೀರಿನಲ್ಲಿ ಟ್ರಕ್ ಇರುವುದನ್ನು ಭಾರತೀಯ ವಾಯುಸೇನೆಯು ಸೋಲಾರ್ ತಂತ್ರಾಜ್ಞಾನದ ಮೂಲಕ ಪತ್ತೆ ಹಚ್ಚಿತ್ತು. ಅಲ್ಲದೇ, ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಕೂಡ ಮಾಹಿತಿ ಹಂಚಿಕೊಂಡಿದ್ದರು.
ಇಂದು ಮಳೆ ಕಡಿಮೆಯಾದರೆ ನೌಕಾನೆಲೆಯ ಮುಳುಗು ತಜ್ಞರು ಲಾರಿಯ ಸಮೀಪಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಲಾರಿ ಒಳಗೆ ಸಿಲುಕಿಕೊಂಡಿರುವ ಚಾಲಕ ಅರ್ಜುನಗಾಗಿ ಹುಡುಕಾಟ ಮುಂದುವರೆಯಲಿದೆ. ಕ್ಯಾಬಿನ್ ನಲ್ಲಿ ಅವರಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ಬಳಿಕ ಲಾರಿಯನ್ನು ಮೇಲತ್ತಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.