ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ ಬಿಯರ್ ಮೇಲೆ ತೆರಿಗೆ ಹೆಚ್ಚಿಸಲಾಗಿದ್ದು, ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಿದೆ. ಇದೀಗ ಮತ್ತೆ 10ರಿಂದ 20 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಬಿಯರ್ ದರ ಏರಿಕೆ ಮಾಡಲು ಕಂಪನಿಗಳು ತೀರ್ಮಾನ ಮಾಡುವ ಮೂಲಕ ಬಿಯರ್ ಪ್ರಿಯರಿಗೆ ಶಾಕ್ ನೀಡಿದೆ.
ಸರ್ಕಾರ ಈ ಹಿಂದೆ ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.
ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರದಿಂದ ಜಾರಿಯಾಗಲಿದೆ. ಎಲ್ಲ ಬ್ರ್ಯಾಂಡ್ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಬಳಕೆಯಾಗುವ ಲೆಜೆಂಡ್, ನಾಕೌಟ್, ಆರ್ಸಿ ಸ್ಟ್ರಾಂಗ್, ಬುಲೆಟ್, ಪವರ್ ಕೂಲ್ ಸೇರಿ ಎಲ್ಲಾ ಬ್ರಾಂಡ್ ಗಳ ಬಿಯರ್ ದರ ಏರಿಕೆಯಾಗಲಿದೆ ಎನ್ನಲಾಗಿದೆ.