Microsoft Outage: ಮೈಕ್ರೋಸಾಫ್ಟ್ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯುಂಟಾದ ಕಾರಣ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಅವಲಂಬಿಸಿದ್ದ ಹಲವು ಸೇವೆಗಳಿಗೆ ತೊಂದರೆಯುಂಟಾಗಿದೆ. ವಿಶ್ವದಾದ್ಯಂತ ವಿಮಾನ, ಬ್ಯಾಂಕ್, ಷೇರು ಮಾರುಕಟ್ಟೆ, ಪಾವತಿ ಸೇವೆ ಹಾಗೂ ತುರ್ತು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ವಿಶ್ವದಾದ್ಯಂತ ಅನೇಕ ಕಂಪನಿಗಳು ಮೈಕ್ರೋಸಾಫ್ಟ್ ತಂತ್ರಾಂಶವನ್ನು ಆಧರಿಸಿದ್ದು, ಭದ್ರತಾ ಪರಿಹಾರಕ್ಕಾಗಿ ಒದಗಿಸಿರುವ ಸೈಬರ್ ಸೆಕ್ಯೂರಿಟಿ ವೇದಿಕೆಯಾದ ಕ್ರೌಡ್‌ಸ್ಟ್ರೈಕ್ ಫಾಲ್ಕಾನ್ ವೈಫಲ್ಯದಿಂದಾಗಿ ತಾಂತ್ರಿಕ ದೋಷ ಸಂಭವಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ತಡವಾಗುವ ಕಾರಣ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ಮೈಕ್ರೋಸಾಫ್ಟ್, “ನಮ್ಮ ದುರಸ್ತಿ ಕಾರ್ಯಚಟುವಟಿಕೆಗಳು ನಡೆಯುತ್ತಿರುವುದರಿಂದ ಹಲವು ಸೇವೆಗಳಲ್ಲಿ ದೋಷ ಉಂಟಾಗಿರುವುದಕ್ಕೆ ಕಾರಣವಾಗಿದೆ” ಎಂದು ತಿಳಿಸಿದೆ.
ಭಾರತದಲ್ಲೂ ಕೂಡ ವಿಮಾನ ಕಾರ್ಯಾಚರಣೆಗಳು, ಪಾವತಿ ವ್ಯವಸ್ಥೆಗಳು ಹಾಗೂ ವಾಣಿಜ್ಯ ಚಟುವಟಿಕೆ ಸೇರಿದಂತೆ ಹಲವು ಸೇವೆಗಳಲ್ಲಿ ಸಮಸ್ಯೆಯುಂಟಾಗಿದೆ. ವಿಮಾನ ನಿಲ್ದಾಣದಲ್ಲಿ ತೊಂದರೆಯುಂಟಾಗಿರುವ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದ್ದು, ಸಮಸ್ಯೆಯನ್ನು ಪರಿಹರಿಸಲು ಮೈಕ್ರೊಸಾಫ್ಟ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.