ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘೀ ಪ್ರಕರಣಗಳು ಸರ್ಕಾರ ಕೂಡಲೇ ತುರ್ತು ಪರಿಸ್ಥಿತಿ ಘೋಷಿಸಿ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್(R. Ashoka) ಸರ್ಕಾರಕ್ಕೆ ಆಗ್ರಹಿಸಿದರು.
ಜಯನಗರದ ಆಸ್ಪತ್ರೆಯಲ್ಲಿ ಭೇಟಿ ನೀಡಿ ಸೋಂಕಿತರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು ಕಳೆದ ಹಲವು ದಿನಗಳಿಂದ ಡೆಂಗ್ಯೂ ಜ್ವರ(Dengue)ವು ಹೆಚ್ಚಾಗುತ್ತ ಮಹಾಮಾರಿಯಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಈಗಾಗಲೇ ದಿನಕ್ಕೆ 3 ರಿಂದ 4 ಜನ ಈ ರೋಗದಿಂದ ಮೃತಪಡುತ್ತಿದ್ದಾರೆ. ಕೂಡಲೇ ಡೆಂಗ್ಯೂ ತುರ್ತು ಪರಿಸ್ಥಿತಿ ಘೋಷಿಸಬೇಕು ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಭಾನುವಾರವು ಎರಡು ಮಕ್ಕಳು ಡೆಂಗ್ಯೂ ಕಾರಣದಿಂದ ಮೃತಪಟ್ಟಿದ್ದಾರೆ. ಇದು ಅತ್ಯಂತ ಬೇಸರದ ಸಂಗತಿ ಕೋವಿಡ್ 19 ಮಹಾಮಾರಿ ಬಂದಾಗ ಬಿಜೆಪಿ ಸರ್ಕಾರವು ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ನೀಡಲಾಗಿತ್ತು. ಡೆಂಗ್ಯೂ ಪರೀಕ್ಷೆ ಮಾಡುವಂತೆ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು. ಮೊದಲು ಉಚಿತವಾಗಿ ಸೇವೆಗಳನ್ನು ಕೊಟ್ಟು ನಂತರ ಜನರಿಂದ ಹಣ ವಸೂಲಿ ಮಾಡುವುದು ಬೇಡ, ಹೆಚ್ಚೆಂದರೆ 10 ಕೋಟಿ ಖರ್ಚಾಗಬಹುದು ಮೂರುವರೆ ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿರುವ ಸರ್ಕಾರಕ್ಕೆ ಇದು ಯಾವ ಹೊರೆಯೂ ಆಗುವುದಿಲ್ಲ. ಜನರ ರಕ್ಷಣೆಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸರ್ಕಾರ ಜನರಿಗೆ ರವಾನೆ ಮಾಡಬೇಕು ಎಂದರು.
ಕೋವಿಡ್ ಮಾದರಿಯಲ್ಲೇ ಡೆಂಗ್ಯೂ ಸೋಂಕಿತರಿಗೆ ಪ್ರತ್ಯೇಕ ಚಿಕಿತ್ಸೆ ಘಟಕಗಳು ಮತ್ತು ವಾರ್ಡ್ಗಳನ್ನು ತೆರೆಯಬೇಕು. ಅನೇಕ ಆಸ್ಪತ್ರೆಗಳಲ್ಲಿ ಔಷಧೀಯ ಕೊರತೆ ಇದೆ ಎಂದು ನನಗೆ ತಿಳಿದು ಬಂದಿದೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮರ್ಪಕವಾಗಿ ಔಷಧಿಗಳನ್ನು ಆಸ್ಪತ್ರೆಗೆ ಪೂರೈಸಬೇಕು ವೈದ್ಯ ತಜ್ಞರ ಸಭೆ ಕರೆದು ಈ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದರು.