Wayanad landslide: ಕೇರಳದ ಮುಂಜಾನೆಯಿಂದ ಹೆಚ್ಚಿಗೆ ಮಳೆಯಾಗುತ್ತಿದ್ದು , ವಯನಾಡ್ ಜಿಲ್ಲೆಯ ಮೆಪ್ಪಾಡಿ, ಚುರ್ಲಮಲಾ ಪ್ರದೇಶಗಳಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಮೃತರ ಸಂಖ್ಯೆ 123 ಕ್ಕೆ ಏರಿಕೆಯಾಗಿದೆ.
ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಎಂದು ಹೇಳಲಾಗುತ್ತದೆ. ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ.
ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ನಸುಕಿನ 2 ಗಂಟೆ ವೇಳೆಗೆ ಮೊದಲ ಭೂಕುಸಿತ ಸಂಭವಿಸಿದೆ, ಬಳಿಕ ಬೆಳಗಿನ ಜಾವ 4.10ಕ್ಕೆ ಮತ್ತೆ ಭೂಕುಸಿತ ಸಂಭವಿಸಿದ್ದು, ಮೆಪ್ಪಾಡಿ, ಮುಂಡಕ್ಕೆ ಮತ್ತು ಚೂರಲ್‌ಮಾಲಾ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಮಲಗಿದ್ದ ವೇಳೆ ಭೂಕುಸಿತ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯದಾಯಿತು. ಪರಿಣಾಮ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ವೆಲ್ಲಾರಿಮಾಲಾ ಪ್ರದೇಶದಲ್ಲಿ ಶಾಲೆಯೊಂದು ಸಂಪೂರ್ಣವಾಗಿ ಮಣ್ಣಿನಡಿಯಾಗಿದ್ದು, ಇರುವಝಿಂಜಿಪುಳ ನದಿ ಎರಡು ಭಾಗಗಳಾಗಿ ಹರಿಯುತ್ತಿದೆ.
ವಯನಾಡು ಪ್ರವಾಹ ಹಾಗೂ ಭೂಕುಸಿತದ ಪರಿಸ್ಥಿತಿ ಅವಲೋಕಿಸಲು ಕೇರಳ ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತವು ಈಗಾಗಲೇ ಕನಿಷ್ಠ 104 ಜನರನ್ನು ಬಲಿ ತೆಗೆದುಕೊಂಡಿದೆ. ಕೇರಳ ಸರ್ಕಾರ ಇಂದು ಮತ್ತು ನಾಳೆ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ.
ಭಾರತೀಯ ಸೇನೆಯು ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಈಗಾಗಲೇ ನಿಯೋಜಿಸಲಾದ ಸುಮಾರು 225 ಸಿಬ್ಬಂದಿಯ ಹೊರತಾಗಿ, ಕನಿಷ್ಠ 140 ಸಿಬ್ಬಂದಿಗಳನ್ನು ಒಳಗೊಂಡಿರುವ ಇನ್ನೂ ಎರಡು ತಂಡಗಳನ್ನು ತಿರುವನಂತಪುರಂನಲ್ಲಿ ತುರ್ತು ಸಂದರ್ಭದಲ್ಲಿ ಏರ್ಲಿಫ್ಟ್ ಮಾಡಲು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ.