Bengaluru: ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ವ್ಯಕ್ತಿ ಒಬ್ಬ ರಸ್ತೆಯಲ್ಲಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ಸಿಸಿಟಿವಿ ಕ್ಯಾಮರದಲ್ಲಿ ಸರೆಯಾಗಿದ್ದು, ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ಬರುವ ಕೃಷ್ಣ ನಗರದಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ 5 ಗಂಟೆಗೆ ವಾಕಿಂಗ್ ಹೊರಟಿದ್ದ ಮಹಿಳೆ ಒಬ್ಬರನ್ನು ಅಪರಿಚಿತ ವ್ಯಕ್ತಿ ಹಿಂಬಾಲಿಸಿ ಕೊಂಡು ಬಂದು ಏಕಾಏಕಿ ರಸ್ತೆಯಲ್ಲಿ ತಬ್ಬಿಕೊಂಡು ಕಿರುಕುಳ ನೀಡಿದ್ದಾನೆ. ಮಹಿಳೆಯು ರಾಜಸ್ಥಾನ ಮೂಲದವರಾಗಿದ್ದು ಪ್ರತಿ ದಿನ ಇದೇ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು, ಆದರೆ ಆಗಸ್ಟ್ 2ರಂದು ಬೆಳಗ್ಗೆ ಸರಿಸುಮಾರು 5:00 ಗಂಟೆಗೆ ಈ ಘಟನೆ ನಡೆದಿದೆ.
ಈ ವಿಷಯ ತಿಳಿದ ತಕ್ಷಣ ಮಹಿಳೆಯ ಪತಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋ ಆಧಾರದ ಮೇರೆಗೆ ಕಾರ್ಯಚರಣೆ ನಡೆಸಿದ ಬೆಂಗಳೂರು ಪೊಲೀಸರು ಆರೋಪಿ ಕ್ಯಾಬ್ ಚಾಲಕ ಎಂದು ತಿಳಿದುಬಂದಿದ್ದು ಆತನನ್ನು ಬಂಧಿಸಿದ್ದಾರೆ.
“ಬಂಧಿತ ಆರೋಪಿಯು ಕ್ಯಾಬ್ ಚಾಲಕನಾಗಿದ್ದಾನೆ. ವಿವಿಧ ಕಂಪನಿಗಳ ಉದ್ಯೋಗಿಗಳನ್ನು ಡ್ರಾಪ್ ಹಾಗೂ ಪಿಕ್ ಅಪ್ ಮಾಡುವ ಕೆಲಸ ಮಾಡಿಕೊಂಡಿದ್ದ. ಶುಕ್ರವಾರ ಮುಂಜಾನೆ ಯಾರೂ ಇರದಿದ್ದ ಸಂದರ್ಭದಲ್ಲಿ ಮಹಿಳೆಯನ್ನು ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿದ್ದ” ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲ್ಸಾರ್ ಮಾಹಿತಿ ನೀಡಿದ್ದಾರೆ.