ದೇಶದಲ್ಲಿ ನಾಳೆಯಿಂದ 18ನೇ ಲೋಕಸಭಾ ಅಧಿವೇಶನ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ನೂತನ ಸಚಿವರು ಹಾಗೂ ಸಂಸದರು ಮೊದಲ ಎರಡು ದಿನ ಪ್ರಮಾಣವಚನ ಸ್ವೀಕರಿಸುವ ಪ್ರಕ್ರಿಯೆಯು ನಡೆಯಲಿದೆ.
ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲು ಹಂಗಾಮಿ ಸ್ಪೀಕರ್ ಮಹಾಬಾತ್ ಭತೃಹರಿ ಅವರನ್ನು NDA ಮೈತ್ರಿಕೂಟವು ನೇಮಿಸಿದೆ. ಈ ಆದೇಶವನ್ನು ವಿರೋಧಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ.
ನಾಳೆ ಬೆಳಗ್ಗೆ 11ಗಂಟೆಗೆ ಆರಂಭವಾಗುವ ಅಧಿವೇಶನದಲ್ಲಿ ಮೊದಲಿಗೆ ಪ್ರಧಾನಿ ಮೋದಿ, ಆ ಬಳಿಕ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಅಸ್ಸಾಂನಿಂದ ಮೊದಲ್ಗೊಂಡು ಪಶ್ಚಿಮ ಬಂಗಾಳ ರಾಜ್ಯದ ಸದಸ್ಯರು ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸುವರು. 280 ಸದಸ್ಯರು ಸೋಮವಾರ ಹಾಗೂ 264 ಸದಸ್ಯರು ಮಂಗಳವಾರ ಪ್ರಮಾಣ ಸ್ವೀಕರಿಸಲಿದ್ದಾರೆ. 26ರಂದು ಲೋಕಸಭೆ ಸ್ಪೀಕರ್ ಆಯ್ಕೆ ಚುನಾವಣೆ ಹಾಗೂ 27ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೊದಲ ಎರಡು ದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಡೆಯಲಿದ್ದು, ಇದೇ ಜೂನ್ 26ರಂದು ನೂತನ ಲೋಕಸಭಾ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಸ್ಪೀಕರ್ ಪಟ್ಟವನ್ನು ತನ್ನ ಬಳಿ ಉಳಿಸಿಕೊಳ್ಳಲು ಬಿಜೆಪಿಯು ಅರಸಹಾಸ ಪಡುತ್ತಿದ್ದು, NDA ಮಿತ್ರ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಪಕ್ಷಗಳು ಸ್ಪೀಕರ್ ಸ್ಥಾನ ನೀಡುವಂತೆ ಪಟ್ಟು ಹಿಡಿದು ಕೂತಿವೆ. ಹೀಗಾಗಿ ಇನ್ನೂ ಕೂಡ ಲೋಕಸಭಾ ಅಧ್ಯಕ್ಷರ ಸ್ಥಾನ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ