ಪ್ರಧಾನ ಮಂತ್ರಿಗಳು ತಮ್ಮ ಸರ್ಕಾರ ಉಳಿಸಿಕೊಳ್ಳಲು ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಕರ್ನಾಟಕಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಂಬು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM siddaramaiah) ಕೇಂದ್ರ ಸರ್ಕಾರದ ಬಜೆಟ್ (Union Budget 2024)ಕುರಿತು ಟೀಕಿಸಿದರು.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು ಈ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಚೊಂಬು ಕೊಟ್ಟಿದ್ದಾರೆ, ಕರ್ನಾಟಕಕ್ಕೆ ಪಂಗನಾಮ ಹಾಕಿದ್ದಾರೆ ಎಂದು ಟೀಕಿಸಿದರು.
ಆಂಧ್ರಪ್ರದೇಶ-ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಕೊಟ್ಟಿದ್ದಾರೆ, ಬೇರೆ ರಾಜ್ಯಗಳಿಗೆ ಯಾವುದೇ ಕೊಡುಗೆ ನೀಡಿಲ್ಲ. ಏಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯಬೇಕಂದ್ರೆ ಆ ರಾಜ್ಯಗಳ ಸಹಕಾರ ಬೇಕು, ಅದಕ್ಕಾಗಿ ವಿಶೇಷ ಅನುದಾನವನ್ನ ಕೊಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಕಲ್ಯಾಣ ಕರ್ನಾಟಕಕ್ಕೆ ನಾವು 5,000 ಕೋಟಿ ರೂ. ಕೊಟ್ಟಿದ್ದೇವೆ. ಅದಕ್ಕೆ ಹೊಂದಾಣಿಕೆ ಅನುದಾನ ಕೇಳಿದ್ದೆವು. ಅದನ್ನೂ ಕೊಡಲಿಲ್ಲ. ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ ಎಂಎಸ್‌ಪಿಗೆ ಕಾಯ್ದೆ ಮಾಡಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದರು. ಈ ಬಗ್ಗೆ ಬಜೆಟ್‌ನಲ್ಲಿ ಚಕಾರವನ್ನೇ ಎತ್ತಿಲ್ಲ” ಎಂದು ಹೇಳಿದರು.
ದಲಿತರ ಬಗ್ಗೆ ಮಾತನಾಡುವ ಇವರು ಅನುದಾನ ಕಡಿಮೆ ಮಾಡಿದ್ದಾರೆ. ಕಳೆದ ಮಧ್ಯಂತರ ಬಜೆಟ್‌ನಲ್ಲಿ 9409 ಕೋಟಿ ರೂ. ಮೀಸಲಿಟ್ಟಿದ್ರು. ಆದ್ರೆ ಈಗ 6300 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಕೈಗಾರಿಕಾ, ರೈಲ್ವೆ ಕೃಷಿ ಕ್ಷೇತ್ರಗಳಿಗೆ ಯಾವುದೆ ಕೊಡುಗೆ ಇಲ್ಲ. ಬಹಳ ದಿನಗಳಿಂದ ರಾಯಚೂರಿಗೆ AIIMS ಆಸ್ಪತ್ರೆ ಕೇಳಿದ್ವಿ, ಕೊಟ್ಟಿಲ್ಲ. ಸಂಪೂರ್ಣ ನಿರಾಶದಾಯಕ ಜನವಿರೋಧಿ ಬಜೆಟ್ ಇದು. ಎಂದು ಆಕ್ರೋಶ ವ್ಯಕ್ತಪಡಿಸಿದರು.