ಲೋಕಸಭಾ ಚುನಾವಣೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಒಂದು ಕಡೆ ಆಡಳಿತರೂಢ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಸಿ.ಎಂ, ಡಿಸಿಎಂ ಹುದ್ದೆಗಳ ಬದಲಾವಣೆ ಕೇಳಿಬರುತ್ತದೆ. ಅದರಂತೆಯೇ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರ ಹುದ್ದೆಯೂ ಬದಲಾಗಲಿದೆ.
ಬಿಜೆಪಿ – ಜೆಡಿಎಸ್ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹು ದೊಡ್ಡ ಬಲವನ್ನು ತಂದು ಕೊಟ್ಟಿತ್ತು. ಹಳೆ ಮೈಸೂರು ಭಾಗದಲ್ಲಿ ಎರಡೂ ಪಕ್ಷಗಳು ಕಳೆದ ಚುನಾವಣೆ ಗಳಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿತ್ತು. ಇದೀಗ ಬಿಜೆಪಿ ಹೈಕಮಾಂಡ್ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಸಲಹೆಯ ಮೇರೆಗೆ ಹಲವು ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ನಿರ್ವಹಿಸುತ್ತಿದ್ದರು ಆದರೆ ಈಗ ಚಿಕ್ಕಮಗಳೂರು – ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ವಿಧಾನ ಪರಿಷತ್ ಸ್ಥಾನ ಖಾಲಿಯಾಗಿದ್ದು, ಪ್ರತಿಪಕ್ಷ ನಾಯಕನ ಹುದ್ದೆಗೆ ಬಿಜೆಪಿ ಅನಿವಾರ್ಯವಾಗಿ ಬೇರೊಬ್ಬರನ್ನು ಆಯ್ಕೆ ಮಾಡಲೇ ಬೇಕಾಗಿದೆ.
ಸದ್ಯ ಆರ್. ಅಶೋಕ್ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಆದರೆ ಪ್ರತಿಪಕ್ಷ ನಾಯಕರಾಗಿ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಆರ್. ಅಶೋಕ್ ವಿಫಲರಾಗಿದ್ದಾರೆ ಹಾಗಾಗಿ ವಿಧಾನ ಸಭಾ ಪ್ರತಿಪಕ್ಷ ನಾಯಕನ ಹುದ್ದೆ ಬದಲಾವಣೆಗೂ ಬಿಜೆಪಿ ಸಿದ್ದವಾಗಿದೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಸಿ.ಟಿ ರವಿ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಬಿಜೆಪಿ ಹೈಕಮಾಂಡ್ ಈ ವಿಷಯವಾಗಿ ರಾಜ್ಯದ ವರಿಷ್ಠರ ಜೊತೆ ಚರ್ಚೆ ನಡೆಸುತ್ತಿದೆ. ಒಕ್ಕಲಿಗ ಸಮುದಾಯದ ಸಿಟಿ ರವಿ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸುನಿಲ್ ಕುಮಾರ್ ಹೆಸರು ಕೇಳಿ ಬರುತ್ತಿತ್ತು ಆದರೆ ಬಿಜೆಪಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಆಯ್ಕೆ ಮಾಡುವ ಮೂಲಕ ಸುನಿಲ್ ಕುಮಾರ್ ಅವರಿಗೆ ಅವಕಾಶ ಕೈ ತಪ್ಪಿತು. ಈ ಬಾರಿ ಅವರು ಕೂಡ ಆಕಾಂಕ್ಷಿಯಾಗಿದ್ದು ಯಾರಿಗೆ ವಿಧಾನಪರಿಷತ್ ವಿಪಕ್ಷ ನಾಯಕನ ಸ್ಥಾನ ಒದಗಲಿದೆ ಎಂದು ಕಾದು ನೋಡಬೇಕಾಗಿದೆ.