ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಕೆ ಸುಧಾಕರ್ ಅಭಿನಂದನಾ ಸಂಭ್ರಮಾಚರಣೆಯಲ್ಲಿ ಮದ್ಯ, ಬಾಡೂಟಕ್ಕೆ ಜನರು ನೀಡಲಾಗಿದ್ದು, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯ ಮತ್ತು ರಾಜಕೀಯ ರಂಗದಲ್ಲಿ ಬಾರಿ ಟೀಕೆಗೆ ಗುರಿಯಾಗಿದೆ.
ನೆಲಮಂಗಲದ ಹೊರವಲಯದಲ್ಲಿ ನೂತನವಾಗಿ ಆಯ್ಕೆಯಾದ ಸಂಸದ ಕೆ.ಸುಧಾಕರ್ ಅವರಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಈ ವೇಳೆ ಊಟಕ್ಕೆ ಜನರು ಮುಗಿಬಿದ್ದಿದ್ದರು ಇದರ ಜೊತೆಗೆ ಮಧ್ಯವನ್ನು ಬಂದಿದ್ದ ಕಾರ್ಯಕರ್ತರಿಗೆ ನೀಡಲಾಗುತ್ತಿದ್ದ ಕಾರಣ ಎಣ್ಣೆಗಾಗಿ ಜನರ ನೂಕುನುಗ್ಗಲು ಉಂಟಾಯಿತು. ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಾಹಾರ, ಬಿಯರ್, ಗಟ್ಟಿ ಮದ್ಯದ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು ಎಂದು ವರದಿಗಳು ಕೇಳಿಬಂದಿವೆ.
ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಶಾಸಕ ನಾಗರಾಜು, ಜೆಡಿಎಸ್‌ನ ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ ಕೂಡ ಭಾಗವಹಿಸಿದ್ದು ಕಂಡು ಬಂದಿತ್ತು.
ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಕೆ. ಸುಧಾಕರ್ ಮದ್ಯ ವಿತರಣೆ ಬಗ್ಗೆ ನನಗೆ ತಿಳಿದಿಲ್ಲ. ಇಂತಹದ್ದನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಕಾರ್ಯಕ್ರದಲ್ಲಿ ಭಾಗವಹಿಸಿದ್ದವರು ಎಲ್ಲೋ ಮದ್ಯವನ್ನು ಖರೀದಿಸಿದ್ದು, ಅದನ್ನು ಸ್ಥಳಕ್ಕೆ ತಂದಿರಬಹುದು ಎಂದು ಹೇಳಿದರು.