ಲೋಕಸಭಾ ಚುನಾವಣೆಯ ಫಲಿತಾಂಶ ಇಡೀ ವಿಶ್ವ ವ್ಯಾಪ್ತಿಯಲ್ಲಿ ಚರ್ಚೆಯಾಗಿತ್ತು. ಯಾವ ಪಕ್ಷಕ್ಕೂ ಸರಳ ಬಹುಮತ ಸಿಗದೇ ಮೈತ್ರಿ ಪಕ್ಷಗಳೊಂದಿಗೆ ಎನ್‌ಡಿಎ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬಂದಿದ್ದು. ನೆನ್ನೆ ( ಸೋಮವಾರ) 18ನೇ ಲೋಕಸಭೆಯ ಅಧಿವೇಶನ ಪ್ರಾರಂಭವಾಗಿದೆ. ಇಲ್ಲಿ ಕರ್ನಾಟಕದ 28 ಸಂಸದರು ತಮ್ಮ ಪ್ರಮಾಣವಚನವನ್ನು ದೆಹಲಿಯ ನೂತನ ಸಂಸತ್ ಭವನದಲ್ಲಿ ಕನ್ನಡದಲ್ಲಿ ಸ್ವೀಕರಿಸಿದರು. ಲೋಕಸಭೆಯ ಹಂಗಾಮಿ ಸ್ಪೀಕರ್ ಆದಭತೃಹರಿ ಮಹತಾಬ್ ನೂತನ ಸಂಸದರಿಗೆ ಪ್ರಮಾಣವಚನ ಬೋಧಿಸಿದರು.
ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಪ್ರಮಾಣವನ್ನು ಮಾತೃಭಾಷೆ ಕನ್ನಡದಲ್ಲಿ ಸ್ವೀಕರಿಸಿದರು.
ಇನ್ನು ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ಸಾಗರ್ ಖಂಡ್ರೆ (ಬೀದರ್), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು-ಕೊಡಗು), ಪಿ.ಸಿ.ಮೋಹನ್ (ಬೆಂಗಳೂರು ಸೆಂಟ್ರಲ್), ಡಾ.ಸಿ.ಎನ್.ಮಂಜುನಾಥ್ (ಬೆಂಗಳೂರು ಗ್ರಾಮಾಂತರ), ಬಸವರಾಜ ಬೊಮ್ಮಾಯಿ (ಹಾವೇರಿ) ಮತ್ತಿತರರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ಬಹುತೇಕರು ದೇವರು ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆಯಾದ ಪ್ರಿಯಾಂಕ ಜಾರಕಿಹೊಳಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ತಮ್ಮ ಸಂಪ್ರದಾಯವಾದ ತುಳುನಾಡಿನ ದೈವದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾಗೇರಿ
ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನ ಸಳೆದರು.