18 ನೇ ಲೋಕಸಭಾ ಸ್ಪೀಕರ್ ಅಗಿ ಬಿಜೆಪಿಯ ಸಂಸದ ಓಂ ಬಿರ್ಲಾ(Om Birla) ಮರು ಆಯ್ಕೆ ಅಗಿದ್ದಾರೆ. ಇಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಯಿತು, ನಿರೀಕ್ಷೆಯಂತೆಯೇ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಅವರು ಧ್ವನಿಮತದ ಮೂಲಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸತತ ಎರಡನೇಯ ಬಾರಿ ಸ್ಪೀಕರ್ ಅಗಿ ನೇಮಕಗೊಂಡಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ಇಂಡಿಯಾ ಒಕ್ಕೂಟದ ನಡುವೆ ಸ್ಪೀಕರ್ ಸ್ಥಾನದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಇಂಡಿಯಾ ಒಕ್ಕೂಟವು ತನ್ನ ಅಭ್ಯರ್ಥಿಯನ್ನು ಸ್ಪೀಕರ್ ಚುನಾವಣೆಗೆ ಇಳಿಸಿತ್ತು. ಎಂಟು ಬಾರಿ ಸಂಸದರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ ಸುರೇಶ್ ಚುನಾವಣೆಗೆ ಸ್ಪರ್ಧಿಸಿದ್ದರು.
61 ವರ್ಷದ ಓಂ ಬಿರ್ಲಾ ಅವರು ರಾಜಸ್ಥಾನದ ಕೋಟಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದು, ಇದಕ್ಕೂ ಮುನ್ನ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಶಾಸಕರಾಗಿದ್ದರು.
18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸ್ಪೀಕರ್ ಆಸನದ ಸಮೀಪ ತೆರಳಿ ಅಭಿನಂದಿಸಿದರು.