ಇದೇ ಬರುವ ಶನಿವಾರದಿಂದ (ಆಗಸ್ಟ್ 3) ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆರಂಭಿಸಲು ಉದ್ದೇಶಿಸಿರುವ ಬೆಂಗಳೂರು – ಮೈಸೂರು ಪಾದಯಾತ್ರೆಗೆ ಜೆಡಿಎಸ್ ಪಕ್ಷವು ಅರಂಭಿಕ ಹಿನ್ನೆಡೆ ತೋರಿದೆ.
ರಾಜ್ಯದ ಹಲವೆಡೆ ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾದರೆ, ಕೆಲವೆಡೆ ತೀವ್ರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಸಂಕಷ್ಟಕ್ಕೆ ಒಳಗಾಗಿರುವುದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ – ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಮುಂದೂಡಿಕೆ ಮಾಡುವ ಕುರಿತು ಜೆಡಿಎಸ್ ಕೋರ್ ಕಮಿಟಿ ಸಭೆ ನಿರ್ಣಯ ಕೈಗೊಂಡಿದೆ.
ಜಿ.ಟಿ. ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಡಾ ಹಗರಣದ ವಿರುದ್ಧ ಆ.3ರಿಂದ ಬೆಂಗಳೂರಿನಿಂದ ಮೈಸೂರಿನವರಗೆ ನಡೆಸಲು ನಿರ್ಣಯ ಕೈಗೊಂಡಿರುವ ಪಾದಯಾತ್ರೆಯನ್ನು ತಾತ್ಕಾಲಿಕ ಮುಂದೂಡುವಂತೆ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ ಪಕ್ಷದ ಸ್ಥಳೀಯ ನಾಯಕರು ಪಾದಯಾತ್ರೆ ಮುಂದೂಡಿಕೆಗೆ ತೀವ್ರ ಒತ್ತಡ ಹಾಕಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ರೈತರು ಉಳುಮೆ ಕಾರ್ಯದಲ್ಲಿ ತೊಡಗಿರುತ್ತಾರೆ. ಅಲ್ಲದೇ, ಕೆಲವೆಡೆ ತೀವ್ರತರ ಮಳೆಯಿಂದಾಗಿ ಪ್ರವಾಹ ಭೀತಿ ತಲೆದೋರಿದ್ದು, ಜನತೆ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಜನಪ್ರತಿನಿಧಿಗಳಾಗಿ ಜನತೆಯ ಜೊತೆ ನಿಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ದಿನವನ್ನು ಮುಂದೂಡಿಕೆ ಮಾಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ ಎಂದರು.