ಮೋದಿ 3.0 ಸರ್ಕಾರದ ಮೊದಲ ಬಜೆಟ್(Budget 2024) ಮಂಡನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಲಿದ್ದಾರೆ.
ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿದು, ಹೊಸ ಇತಿಹಾಸ ಬರೆಯಲಿದ್ದಾರೆ.
ಎಲ್ಲಾ ವಿಭಾಗಗಳಲ್ಲಿ ತೆರಿಗೆದಾರರಿಗೆ ಲಾಭದಾಯಕವಾಗುವಂತೆ ಆದಾಯ ತೆರಿಗೆ ರಚನೆಯಲ್ಲಿನ ಬದಲಾವಣೆಗಳ ಮೇಲೆ ಮತ್ತು ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡುವುದನ್ನು ಸುಧಾರಿಸುವ ಕುರಿತು ಬಜೆಟ್ ನಲ್ಲಿ ಮಂಡನೆ ಸಾಧ್ಯತೆಯಿದೆ.
ನಿರ್ಮಲಾ ಸೀತಾರಾಮನ್ ಅವರ ಸತತ ಏಳನೇ ಕೇಂದ್ರ ಬಜೆಟ್ ಮಂಡನೆ ಇದು ಆಗಿರುವುದರಿಂದ, ಈ ಹಿಂದೆ ಸತತ ಆರು ಬಾರಿ ಬಜೆಟ್ ಮಂಡಿಸಿದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮೀರಿಸುತ್ತಾರೆ.
2024-25ರ ಹಣಕಾಸು ವರ್ಷದ ಈ ಪೂರ್ಣ ಬಜೆಟ್ ಮಂಡನೆಯನ್ನು ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಆರಂಭಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಎರಡರಿಂದ ಮೂರು ಗಂಟೆ ಅವಧಿ ಇರುವ ನಿರೀಕ್ಷೆ ಇದೆ.
2024ರ ಕೇಂದ್ರ ಬಜೆಟ್ ಭಾಷಣ ಮಂಡನೆ ಹಲವೆಡೆ ಲೈವ್ ಆಗಿ ಪ್ರಸಾರ ಆಗಲಿದೆ. ಕೇಂದ್ರ ಸರ್ಕಾರದಿಂದ ನಿರ್ವಹಿಸಲಾಗುವ ಸಂಸದ್ ಟಿವಿ ಮತ್ತು ದೂರದರ್ಶನ್ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಈ ವಾಹಿನಿಗಳ ಯೂಟ್ಯೂಬ್ ಚಾನಲ್ಗಳಲ್ಲೂ ನೇರ ಪ್ರಸಾರ ಇರುತ್ತದೆ. ಇಂಡಿಯಾ ಬಜೆಟ್ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮ್ ಇರುತ್ತದೆ.