ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿದ್ದು, ನಿಮ್ಮನ್ನ ಮನೆಗೆ ಕಳುಹಿಸುವರೆಗೂ ಹೋರಾಟ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ(B. S. Yediyurappa) ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದರು.
ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಕಾರ್ಯಕ್ರಮದ ಸಮಾರೋಪ ಸಭೆಯಲ್ಲಿ ದೋಸ್ತಿ ಪಕ್ಷಗಳು ಶಕ್ತಿ ಪ್ರದರ್ಶನ ಮಾಡಿದವು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರು ಮೂಡ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ .ಬಿಎಸ್ ಯಡಿಯೂರಪ್ಪನವರು ಸಿದ್ದರಾಮಯ್ಯನವರು ನನ್ನನ್ನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ನನ್ನ ಜೀವನದ ಕೊನೆಯ ಉಸಿರು ಇರುವರೆಗೂ ರಾಜಕೀಯದಲ್ಲಿದ್ದು ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮಾಡುತ್ತೇನೆ. ಜನರು ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಬೇಸತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ನಿಮ್ಮ ಪಾಪದ ಕೊಡ ತುಂಬಿದೆ ಬೇರೊಬ್ಬರ ಹಗರಣದ ಬಗ್ಗೆ ಮಾತನಾಡುವ ನೀವು ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು.
ನಿಮಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ
ಆಡಳಿತ ಪಕ್ಷದಲ್ಲಿರುವ ನೀವು ವಿಧಾನಸಭಾ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ. ನಮ್ಮ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷವು ನಿಮ್ಮನ್ನು ಸೋಲಿಸಿ ಅಧಿಕಾರಕ್ಕೆ ಬರುತ್ತೇವೆ. ಲೂಟಿ ಹಗರಣಗಳ ಕೆಲಸದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ನಿರತವಾಗಿದೆ. ಜನರಿಗೆ ಉತ್ತಮ ಆಡಳಿತ ಪಕ್ಷ ಬೇಕಾಗಿದೆ ಅದಕ್ಕಾಗಿ ನೀವು ವಿಧಾನಸಭೆ ವಿಸರ್ಜನೆ ಮಾಡಿ ಬನ್ನಿ. ಬಿಜೆಪಿ ಮತ್ತು ಜೆಡಿಎಸ್ ಪಕ್ಷ ನಿಶ್ಚಿತವಾಗಿ ಜನರು ಅಧಿಕಾರಕ್ಕೆ ತರುತ್ತಾರೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಹಳ್ಳ ಹಿಡಿದಿವೆ
ನಿಮ್ಮ ಸರ್ಕಾರದಲ್ಲಿ ಇಡೀ ರಾಜ್ಯದಲ್ಲಿ ಒಂದು ಕಿಲೋಮೀಟರ್ ರಸ್ತೆಯು ಕೂಡ ಆಗುತ್ತಿಲ್ಲ. ರಾಜ್ಯದ ನೀರಾವರಿ ಯೋಜನೆಗಳು ಹಳ್ಳ ಹಿಡಿದು ಕೂತಿವೆ. ಅಭಿವೃದ್ಧಿಗೆ ನಿಮ್ಮ ಬಳಿ ಹಣವಿಲ್ಲ, ಎಲ್ಲವನ್ನು ಲೂಟಿ ಮಾಡಿ ಖಾಲಿ ಕೈನಲ್ಲಿ ಕುಳಿತಿದ್ದೀರಿ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀವು ಟೀಕೆ ಮಾಡುತ್ತೀರಿ, ಅವರನ್ನು ಇಡೀ ವಿಶ್ವವೇ ನಮ್ಮ ದೇಶದ ಪ್ರಧಾನಿಯನ್ನು ಒಪ್ಪಿಕೊಂಡಿದೆ, ಅವರ ವಿರುದ್ಧ ಮಾತನಾಡುವುದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು
ಈ ಪಾದಯಾತ್ರೆಯೂ ರಾಜ್ಯದಲ್ಲಿ ಐತಿಹಾಸಿಕವಾಗಿ ಉಳಿಯುತ್ತದೆ. ಭ್ರಷ್ಟ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ನಾವು ಮನೆಗೆ ಹೋಗುವುದಿಲ್ಲ. ಈ ಪಾದಯಾತ್ರೆ ಪ್ರಾರಂಭವಷ್ಟೇ ನಿಮ್ಮ ಭ್ರಷ್ಟ ಸರ್ಕಾರವನ್ನು ತೊಲಗಿಸುವವರೆಗೂ ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದರು.