ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಗಳಿದ್ದು ಇನ್ನೆರಡು ತಿಂಗಳುಗಳಲ್ಲಿ ಕೆಲವು ಸಚಿವರು ತಮ್ಮ ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳದಿದ್ದರೆ, ಬದಲಾವಣೆ ಮಾಡಬೇಕಾಗುತ್ತದೆ ಎಂದು ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗೆ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಚಿವರ ಜೊತೆ ಮಹತ್ವದ ಸಭೆ ನಡೆದಿದ್ದು, ಇದರಲ್ಲಿ ರಾಜ್ಯದ 10 ಸಚಿವರಿಗೆ ವಾರ್ನಿಂಗ್ ನೀಡಲಾಗಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಮುಗಿಲೆದ್ದಿರುವ ಮೈಸೂರಿನ ಮುಡಾ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಹಗರಣ ಕುರಿತು ಮಾಹಿತಿ ಪಡೆಯಲು ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ ಪ್ರಸಕ್ತ ರಾಜಕಾರಣದ ಹಲವಾರು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ.
ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಲು ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಡುವುದು ಅನಿವಾರ್ಯ. ಕೆಲವರು ನಿಷ್ಠೆಯಾಗಿದ್ದಾರೆ ಇನ್ನು ಕೆಲವರು ನಿರ್ದಿಷ್ಟವಾದ ಆಪಾದನೆಗಳಿವೆ. ಈ ಕುರಿತು ಹೈಕಮಾಂಡ್ ಗಮನ ವಹಿಸಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶದ ವರದಿಯನ್ನು ಪರಿಗಣಿಸಿ ಸಚಿವ ಸಂಪುಟದ ಸರ್ಜರಿ ನಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಹಕಾರ ಸಚಿವ ಕೆ.ಎನ್ ರಾಜಣ್ಣ, ಸೇರಿದಂತೆ 10 ಸಚಿವರಿಗೆ ವಿವಿಧ ಕಾರಣಗಳಿಂದ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಲವು ಶಾಸಕರು ಸಚಿವರ ವಿರುದ್ಧ ದೂರು ನೀಡಿದ್ದು, ಪ್ರತಿಯೊಬ್ಬ ಸಚಿವರ ಬಗ್ಗೆಯೂ ವೈಯಕ್ತಿಕ ಮೌಲ್ಯಮಾಪನ ವರದಿ ನಮ್ಮ ಬಳಿ ಇದೆ. ಸಚಿವರ ಕೆಲಸ ತವರು ಕ್ಷೇತ್ರ ಮತ್ತು ಉಸ್ತುವಾರಿ ಜಿಲ್ಲೆಗಷ್ಟೇ ಸೀಮಿತವಾಗದೆ ಪಕ್ಷ ಎಲ್ಲಾ ಶಾಸಕರು ಹಾಗೂ ರಾಜ್ಯಕ್ಕೆ ಸಹಾಯವಾಗುವಂತಿರಬೇಕು. ರಾಜ್ಯ ಪ್ರವಾಸ ಮಾಡಿ ಇಲಾಖೆ ಸುಧಾರಣೆ ತಂದು ಜನರಲ್ಲಿ ಉತ್ತಮ ಹೆಸರು ತರುವಂತೆ ಕೆಲಸ ಮಾಡಿ ನೀವು ಸರಿಯಾಗಿ ಕೆಲಸ ಮಾಡಿದರೆ ಲೋಕಸಭೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತಿದ್ದೆವು ಎಂದು ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಕ್ಲಾಸ್ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.