Ind vs Ban Women Asia Cup 2024: ಮಹಿಳಾ ಏಷ್ಯಾಕಪ್ 2024ರ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಶ್ರೀಲಂಕಾದ ದಂಬುಲಾದ ರಂಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಅಜೇಯ ಅರ್ಧಶತಕ ಮತ್ತು ಶಫಾಲಿ ವರ್ಮಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 10 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತು. ಬಾಂಗ್ಲಾ ನೀಡಿದ 81 ರನ್ ಗಳ ಗುರಿ ಬೆನ್ನಟ್ಟಿದ ಭಾರತ ತಂಡ 11 ಓವರ್ ಗಳ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 83 ರನ್ ಬಾರಿಸಿ ಗೆಲುವಿನ ನಗೆ ಬೀರಿತು ಈ ಗೆಲುವಿನ ಮೂಲಕ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ.
ಬಾಂಗ್ಲಾದೇಶ ನಾಯಕಿ ನಿಗರ್ ಸುಲ್ತಾನ 51 ಎಸೆತಗಳಲ್ಲಿ 31 ರನ್ ಗಳಿಸಿದರೆ, ಶೋರ್ನಾ ಅಕ್ತರ್ 18 ಎಸೆತಗಳಲ್ಲಿ 19 ರನ್ ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಯಾವ ಬ್ಯಾಟರ್ ಕೂಡ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ.
ಭಾರತದ ಪರವಾಗಿ ಬೌಲಿಂಗ್ ಮಾಡಿದ ರೇಣುಕಾ ಮತ್ತು ರಾಧಾ ಯಾದವ್ ತಲಾ 3 ವಿಕೆಟ್ ಪಡೆದರು. ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದು ವಿಕೆಟ್ ಪಡೆದರು.
ಅದ್ಭುತ ಆಟ ಆಡಿದ ಆರಂಭಿಕರು
ಬಾಂಗ್ಲಾದೇಶ ನೀಡಿದ 80 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತದ ಬಾಂಗ್ಲಾ ಬೌಲರ್ಗಳಿಗೆ ವಿಕೆಟ್ ಉರುಳಿಸುವ ಒಂದೇ ಒಂದು ಅವಕಾಶ ನೀಡಲಿಲ್ಲ. ಹೀಗಾಗಿ ಕೇವಲ 11 ಓವರ್ಗಳಲ್ಲಿ ಭಾರತ ತಂಡ ಗೆಲುವಿನ ನಗೆಬೇರಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಅಜೇಯ 83 ರನ್ಗಳ ಜೊತೆ ಆಟ ಆಡುವ ಮೂಲಕ ತಂಡವನ್ನು ಫೈನಲ್ ಗೆ ತೆಗೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.