India vs South Africa: ಟಿ20 ವಿಶ್ವಕಪ್ ನ ಫೈನಲ್ ಪಂದ್ಯವು ಇಂದು ನಡೆಯಲಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್ ಗಾಗಿ ಮೈದಾನದಲ್ಲಿ ಸೆಣೆಸಾಟ ನಡೆಸಲಿವೆ. ಆದರೆ ಈ ಪಂದ್ಯಕ್ಕೆ ಮಳೆರಾಯನ ವಕ್ರದೃಷ್ಟಿ ಬಿದ್ದಿದ್ದು, ಒಂದು ವೇಳೆ ಪಂದ್ಯರದ್ದಾದರೆ ವಿಜೇತರ ನಿರ್ಧಾರ ಹೇಗೆ ಮಾಡುತ್ತಾರೆ ಮತ್ತು ಪಂದ್ಯದ ಸಮಯದಲ್ಲಿ ಮಳೆರಾಯ ಆಗಮನ ಹೇಗಿದೆ ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
ಭಾರತ vs ಇಂಗ್ಲೆಂಡ್ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಇನ್ನಿಲ್ಲದಂತೆ ಕಾಡಿದ್ದ ಮಳೆರಾಯ ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಇದೆ. ಹವಮಾನ ಇಲಾಖೆಯ ಮೂಲಗಳ ಪ್ರಕಾರ ಪಂದ್ಯ ನಡೆಯುವ ಸಮಯಕ್ಕೆ ಬಾರ್ಬಡೋಸ್ ಪ್ರದೇಶದಲ್ಲಿ ಶೇ.70ರಷ್ಟು ಮಳೆ ಬೀಳುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದು ನಡೆಯುವ ಫೈನಲ್ ಪಂದ್ಯಕ್ಕೆ ಮಳೆರಾಯನ ಕಾಟ ಇದ್ದೇ ಇರುತ್ತದೆ.
ಸತತ ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯ ತಂಡವಾಗಿ ಫೈನಲ್ ಗೆ ಲಗ್ಗೆಟ್ಟಿರುವ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ವಿಶ್ವಕಪ್ ಗಾಗಿ ಮೈದಾನದಲ್ಲಿ ಹೋರಾಟ ನಡೆಸುತ್ತವೆ. ಈ ಬಾರಿ ಫೈನಲ್ ಗೆದ್ದು ತನ್ನ ಹಣೆಗೆ ಅಂಟಿರುವ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಅಳಿಸಿಹಾಕಲು ಏಡನ್ ಮರ್ಕ್ರಾಮ್ ಪಡೆ ಉತ್ಸುಕವಾಗಿದ್ದು, ಐಸಿಸಿ ವಿಶ್ವಕಪ್ ನಲ್ಲಿ ಬರೊಬ್ಬರಿ 10 ವರ್ಷಗಳ ಬಳಿಕ ಫೈನಲ್ ಗೇರಿರುವ ಭಾರತ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಒಂದು ವೇಳೆ ಇಂದು ಪಂದ್ಯರದ್ದಾದರೆ ಏನು ಮಾಡಲಾಗುತ್ತದೆ..?
ಮಳೆಯು ಹೆಚ್ಚಾಗಿ ಮೈದಾನದಲ್ಲಿ ಪಂದ್ಯ ನಡೆಸಲು ಸಾಧ್ಯವಿಲ್ಲದಿದ್ದರೆ, ಹಾಲಿ ಟಿ20 ವಿಶ್ವ ಕಪ್ ದುನಿಯಾ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಲಾಗಿದೆ. ಒಂದು ವೇಳೆ ಇಂದು ಪಂದ್ಯ ನಡೆಯದೇ ಇದ್ದರೆ ಮೀಸಲು ದಿನಕ್ಕೆ ಮುಂದುವರಿಯಲಿದೆ.
ಜಂಟಿ ವಿಜೇತರ ಘೋಷಣೆ
ಒಂದು ವೇಳೆ ಫೈನಲ್ ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಈ ಹಿಂದೆ 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಭಾರತ ಮತ್ತು ಶ್ರೀಲಂಕ ತಂಡವನ್ನು ಜಂಟಿ ವಿಜೇತರ ತಂಡಗಳು ಎಂದು ಘೋಷಣೆ ಮಾಡಲಾಗಿತ್ತು.