ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 2024 ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಇಂದು(ಜೂನ್ 16) ದೇಶದಾದ್ಯಂತ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದೆ. ಪರೀಕ್ಷೆಯು ಎರಡು ಅವಧಿಗಳಲ್ಲಿ ಬೆಳಿಗ್ಗೆ 9.30 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ನಡೆಯಲಿದೆ.
ಈ ಹಿಂದೆ ಮೇ 26ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಲೋಕಸಭೆ ಚುನಾವಣೆಯ ಹಿನ್ನೆಲೆ ಜೂನ್ 16ಕ್ಕೆ ಮುಂದೂಡಲಾಗಿತ್ತು. ಹಾಗಾಗಿ ಇಂದು ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.
UPSC ಯಿಂದ ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS), ಇತ್ಯಾದಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಅದರಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವಾಗಿರುತ್ತದೆ. ಮೂರು ಹಂತಗಳಲ್ಲಿ ಪಾಸ್ ಆದ ಅಭ್ಯರ್ಥಿಗಳನ್ನು ಸೇವೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳ ಅನುಕೂಲಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ
ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಅವರ ಸುಗಮ ಪ್ರಯಾಣಕ್ಕೆ ವಿವಿಧ ರಾಜ್ಯ ಸಾರಿಗೆ ಇಲಾಖೆಗಳು ಹೆಚ್ಚಿನ ಬಸ್ ವ್ಯವಸ್ಥೆ ಮಾಡಿದೆ.
ದೆಹಲಿ ಹಾಗೂ ಕಲ್ಕತ್ತಾದಲ್ಲಿ ಮುಂಜಾನೆಯಿಂದಲೇ ಮೆಟ್ರೋ ವ್ಯವಸ್ಥೆ ಆರಂಭಗೊಂಡಿವೆ. ಇದರಿಂದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಹಾಯಕವಾಗಿದೆ.